ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ನಿರುದ್ಯೋಗಿ ರಾಜಕಾರಣಿಗಳಾಗಿದ್ದಾರೆ. ಅವರಿಗೆ ಭವಿಷ್ಯದಲ್ಲೂ ಯಾವುದೇ ಕೆಲಸ ಸಿಗಲ್ಲ ಎಂದು ಒಎಂಸಿ ಗಣಿ ಧಣಿ, ಸಚಿವ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ತಮಗೆ ಸಂತಸವಾಗಿರುವುದಾಗಿ ಹೇಳಿದರು. ಅಲ್ಲದೇ ಸುಪ್ರೀಂ ತೀರ್ಪಿನ ನಂತರವಾದ್ರೂ ಗೌಡರು, ಸಿದ್ದರಾಮಯ್ಯ ನಿಜಾಂಶವನ್ನು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ತಮ್ಮ ಮಾತಿನುದ್ದಕ್ಕೂ ಕಟುವಾಗಿ ಟೀಕಿಸಿದ ಅವರು, ದೇವೇಗೌಡ, ಸಿದ್ದರಾಮಯ್ಯ ಹಾಗೂ ನಾಯ್ಡು ಬಳ್ಳಾರಿ ಗಣಿ ಕುಳ ರಾಹುಲ್ ಬಲ್ಡೋಟ ಅವರು ನೀಡುವ ಹಣದ ಆಮಿಷದಿಂದ ನಮ್ಮನ್ನು ತೇಜೋವಧೆ ಮಾಡುವ ಕೆಲಸಕ್ಕೆ ಮುಂದಾಗಿರುವುದಾಗಿ ಆರೋಪಿಸಿದರು.
ಗೌಡ ಮತ್ತು ನಾಯ್ಡು ಗಣಿಗಾರಿಕೆ ಹೆಸರಲ್ಲಿ ನಮ್ಮನ್ನು ರಾಷ್ಟ್ರಮಟ್ಟದಲ್ಲಿಯೂ ಖಳ ನಾಯಕರಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದೀಗ ಸುಪ್ರೀಂಕೋರ್ಟ್ ತೀರ್ಪಿನಿಂದ ಕೊನೆಗೂ ಸತ್ಯಕ್ಕೆ ಜಯ ಲಭಿಸಿದಂತಾಗಿದೆ ಎಂದರು.