ರಾಜ್ಯದ 15 ಜಿಲ್ಲೆಗಳಲ್ಲಿ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಘರ್ಷಣೆ, ಮತದಾನ ಸ್ಥಗಿತದಂತಹ ಸಣ್ಣ, ಪುಟ್ಟ ಘಟನೆ ಹೊರತುಪಡಿಸಿ ಶಾಂತಿಯುತವಾಗಿ ಮತದಾನ ನಡೆಯುವ ಮೂಲಕ ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮೇ 17 ರಂದು ಮತ ಎಣಿಕೆ ನಡೆಯಲಿದೆ.
ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಬೆಳಗಾವಿ, ಬಿಜಾಪುರ ಸೇರಿದಂತೆ 15 ಜಿಲ್ಲೆಗಳ 2833 ಗ್ರಾಮ ಪಂಚಾಯಿತಿಗಳ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡು, 5ಗಂಟೆಗೆ ಮುಕ್ತಾಯವಾಗಿತ್ತು. ಮೊದಲ ಹಂತದ ಮತದಾನದಂತೆಯೇ 2ನೇ ಹಂತದಲ್ಲಿಯೂ ಹಲವಾರು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿನ ಹೆಸರಿನ ಗೊಂದಲ, ಗುಂಪು ಘರ್ಷಣೆ, ಮತದಾನ ಸ್ಥಗಿತದಂತಹ ಘಟನೆ ಮುಂದುವರಿದಿತ್ತು.
ಮತದಾರ ಸಾವು: ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ವೇಳೆ ವ್ಯಕ್ತಿಯೊಬ್ಬರು ಹಠಾತ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಉಪ್ಪಾರ ಕೊಪ್ಪಲಿನಲ್ಲಿ ನಡೆದಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದರಾಜು ಎಂಬವರು ಮತದಾನ ಮಾಡಲು ಸಾಲಿನಲ್ಲಿ ನಿಂತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾರೆ.
ಘರ್ಷಣೆ-ಪೊಲೀಸ್ ಲಾಠಿ ಪ್ರಹಾರ: ಮತದಾನ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಎರಡು ಗ್ರಾಮಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಮೈಸೂರಿನ ರಮ್ಮನಹಳ್ಳಿಯ ಮತಗಟ್ಟೆ ಬಳಿ ಮತ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಮತಪಟ್ಟಿಯಲ್ಲಿ ಹೆಸರಿದ್ದರೂ ಮತದಾನಕ್ಕೆ ಅವಕಾಶ ಮಾಡಿ ಕೊಡದ ಚುನಾವಣಾಧಿಕಾರಿ ವಿರುದ್ಧ ಘರ್ಷಣೆಗೆ ಇಳಿದ ಘಟನೆ ಬಾಗಲಕೋಟೆ ಅಮೀನಗಢದಲ್ಲಿ ನಡೆದಿದೆ. ಗದಗ ತಾಲೂಕಿನ ನಾಗಾವಿಯಲ್ಲಿ ಮತದಾನ ಮಾಡುವ ವಿಚಾರದಲ್ಲಿ ಗುಂಪು ಘರ್ಷಣೆ ನಡೆದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
44, 223 ಸ್ಥಾನಗಳಿಗೆ ನಡೆದ ಚುನಾವಣೆಗಾಗಿ 16064 ಮತಗಟ್ಟೆಗಳಿದ್ದು, 4539 ಸೂಕ್ಷ್ಮ ಹಾಗೂ 3226 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿತ್ತು. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಇಬ್ಬರು ಕಾನ್ಸ್‌ಟೇಬಲ್, ಒಬ್ಬರು ಹೆಡ್ ಕಾನ್ಸ್‌ಟೇಬಲ್ ಅನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳಿಗೆ ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ನಕ್ಸಲ್ ಪೀಡಿತ ಪ್ರದೇಶಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಕುಂದಾಪುರ ತಾಲೂಕುಗಳಲ್ಲಿ ವಿಶೇಷ ಭದ್ರತೆ ಒದಗಿಸಲಾಗಿತ್ತು.