ನಟಿ ರಂಜಿತಾಳೊಂದಿಗಿನ ರಾಸಲೀಲೆ ಪ್ರಕರಣದಲ್ಲಿ ಬಂಧಿತನಾಗಿರುವ ಕಾಮಿ ನಿತ್ಯಾನಂದನ ನ್ಯಾಯಾಂಗ ಬಂಧನವನ್ನು ಮತ್ತೆ ಮೇ 26ರವರೆಗೆ ವಿಸ್ತರಿಸಿ ರಾಮನಗರ ಸಿವಿಲ್ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.
ನಿತ್ಯಾನಂದ ಸ್ವಾಮಿಗೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಮೇ 12ರವರೆಗೆ ವಿಧಿಸಿದ್ದ ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಅವರು, ಮೇ 26ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದಾಗಿ ಆದೇಶ ನೀಡಿದರು. ರಾಮನಗರ ಜಿಲ್ಲಾ ಕೋರ್ಟ್‌ಗೆ ನಿತ್ಯಾನಂದನ ಪರ ವಕೀಲರಾದ ನಿತಿನ್ ಪ್ರಧಾನ್ ಅವರ ಸಹಾಯಕ ವಕೀಲ ವೇದವ್ಯಾಸ್ ಹಾಜರಾಗಿದ್ದರು.
ರಾಸಲೀಲೆ ಪ್ರಕರಣ ಬಯಲಾದ ನಂತರ ನಿತ್ಯಾನಂದ ನಾಪತ್ತೆಯಾಗಿದ್ದ, ತನದನಂತರ ಶಿಮ್ಲಾದಲ್ಲಿ ಸೆರೆಹಿಡಿಯಲ್ಪಟ್ಟು, ರಾಜ್ಯ ಸಿಐಡಿ ಪೊಲೀಸರು ನಗರಕ್ಕೆ ಕರೆತಂದ ನಂತರ ಎಂಟು ದಿನಗಳ ಕಾಲ ವಿಚಾರಣೆಗೆ ಗುರಿಪಡಿಸಿದ್ದರು. ನಿತ್ಯಾನಂದನ ಕಸ್ಟಡಿ ಅವಧಿ ಮೇ 30ರಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಮನಗರ ಸೆಷನ್ಸ್ ಕೋರ್ಟ್‌ಗೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಕಾಮಿ ಸ್ವಾಮಿ ನಿತ್ಯಾನಂದನನ್ನು ಮೇ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರು. ಏತನ್ಮಧ್ಯೆ ತನಗೆ ಜಾಮೀನು ನೀಡಬೇಕೆಂದು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮೇ 3ಕ್ಕೆ ನಡೆದಿದ್ದು, ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು.