ವ್ಯಾಪಾರಕ್ಕಾಗಿ ರಾಜಕೀಯಕ್ಕೆ ಕಾಲಿಟ್ಟಿರುವ ಸಚಿವ ಜನಾರ್ದನ ರೆಡ್ಡಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಟೀಕಿಸುವುದೆಂದರೆ ಅದು ಧನ ಮದದ ದುರಹಂಕಾರ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಬೀಗುತ್ತಾ ಜನಾರ್ದನ ರೆಡ್ಡಿ ಅವರು ದೇವೇಗೌಡರನ್ನು ನಿರುದ್ಯೋಗಿ ರಾಜಕಾರಣಿ ಎಂದು ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಧೂಮಕೇತುವಿನ ರೀತಿಯಲ್ಲಿ ಬಂದವರು ಜನಾರ್ದನ ರೆಡ್ಡಿ. ಸೂರ್ಯ ಹತ್ತಿರವಿದ್ದಾಗ ಮಾತ್ರ ಹೊಳೆಯುವ ಧೂಮಕೇತು ಎಂದಿಗೂ ನಕ್ಷತ್ರವಾಗಲಾರದು. ಅಧಿಕಾರಕ್ಕೆ ಹತ್ತಿರವಿರುವುದರಿಂದ ತಮ್ಮನ್ನು ತಾವು ಮುತ್ಸದ್ದಿ ಎಂಬ ಭಾವನೆ ಕಂಡುಕೊಂಡಿದ್ದಾರೆ. ಇವರನ್ನು ಆರಾಧಿಸುವಷ್ಟು ಮೂರ್ಖರು ಜನರಲ್ಲ ಎಂದು ದತ್ತಾ ಎಚ್ಚರಿಸಿದ್ದಾರೆ.
ಅಕ್ರಮ ಗಣಿಗಾರಿಕೆಯ ಬಗ್ಗೆ ರಾಜ್ಯದಲ್ಲಿ ಮೊದಲು ಧ್ವನಿ ಎತ್ತಿದವರು ದೇವೇಗೌಡರು. ಅದು ಸಹ ಧರ್ಮಸಿಂಗ್ ಜೊತೆ ಪಾಲುದಾರವಾಗಿದ್ದ ನಮ್ಮ ಸರ್ಕಾರದ ಅವಧಿಯಲ್ಲೇ ಆಗಿದೆ. ಇದನ್ನು ರೆಡ್ಡಿ ಅರ್ಥ ಮಾಡಿಕೊಂಡರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.