ಸಿಬಿಐ ಅಂದ್ರೆ ಕಾಂಗ್ರೆಸ್ ಇನ್ವೆಸ್ಟಿಗೇಷನ್ ಬ್ಯೂರೋ: ನಾಯ್ಡು
ಬೆಂಗಳೂರು, ಬುಧವಾರ, 12 ಮೇ 2010( 17:42 IST )
NRB
ಕೇಂದ್ರ ಸರ್ಕಾರ ಸಿಬಿಐಯನ್ನು ತನ್ನ ವಿರೋಧಿಗಳನ್ನು ಮಟ್ಟ ಹಾಕಲು ರಾಜಕೀಯ ಅಸ್ತ್ರದಂತೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಆರೋಪಿಸಿದ್ದು, ಸಿಬಿಐನ ಕಾರ್ಯ ಶೈಲಿಯ ಬಗ್ಗೆ ಶ್ವೇತಪತ್ರ ಪ್ರಕಟಿಸುವಂತೆ ಆಗ್ರಹಿಸಿದ್ದಾರೆ.
ಸಿಬಿಐ ಅಂದ್ರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ದೂರಿರುವ ಅವರು, ಕಾಂಗ್ರೆಸ್ ಕೈಗೊಂಬೆಯಂತೆ ಕೆಲಸ ಮಾಡುವ ಮೂಲಕ ಸಿಬಿಐ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಹಾಗಾಗಿ ಸಿಬಿಐ ಕಾರ್ಯವೈಖರಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಬುಧವಾರ ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೇಂದ್ರದ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವ ಪಕ್ಷಗಳ ಮುಖಂಡರ ಮೇಲಿರುವ ಸಿಬಿಐ ತನಿಖೆಯನ್ನು ದುರ್ಬಲಗೊಳಿಸುವ ಹಾಗೂ ಕೈಬಿಡುವ ಕುತಂತ್ರವನ್ನು ಕೇಂದ್ರ ಸರ್ಕಾರ ನಡೆಸಿದ್ದು, ಇದೇ ವೇಳೆ ಸರ್ಕಾರವನ್ನು ವಿರೋಧಿಸುವ ಮುಖಂಡರನ್ನು ಮಟ್ಟ ಹಾಕಲು ಸಿಬಿಐಯನ್ನು ಬಳಸಿಕೊಳ್ಳುವ ವ್ಯವಸ್ಥಿತ ಸಂಚು ಈ ಸರ್ಕಾರದಲ್ಲಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಸಂಸತ್‌ನಲ್ಲಿ ಮಂಡಿಸಲಾಗಿದ್ದ ಖಂಡನಾ ನಿರ್ಣಯದ ವೇಳೆ ಸರ್ಕಾರವನ್ನು ಬೆಂಬಲಿಸಿದ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧದ ಸಿಬಿಐ ತನಿಖೆಯನ್ನು ವಿಳಂಬ ಮಾಡಲಾಗಿದೆ. ಹಾಗೆಯೇ ಸರ್ಕಾರದ ವಿರುದ್ಧ ಎಡಪಕ್ಷದ ಮುಖಂಡರ ಮೇಲಿನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಈ ಎರಡು ಪ್ರಕರಣಗಳು ಯುಪಿಎ ಸರ್ಕಾರ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದರು.