ತನಗೆ ವೆಂಕಟೇಶ್ ಮೂರ್ತಿಯಿಂದ ಜೀವ ಬೆದರಿಕೆ ಇರುವುದಾಗಿ ತೀರ್ಥಹಳ್ಳಿಯ ಪೊಲೀಸ್ ಠಾಣೆಯೊಂದರಲ್ಲಿ ಮೊದಲ ಹೆಂಡತಿ ಸುಮಿತ್ರಾ ಅವರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, ಬಂಧನದ ಭೀತಿ ಅನುಭವಿಸುತ್ತಿದ್ದ ಮೂರ್ತಿಗೆ ತೀರ್ಥಹಳ್ಳಿಯ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ವೆಂಕಟೇಶ್ ಮೂರ್ತಿ ಹಾಗೂ ಅವರ ಆಪ್ತರು ಸೇರಿಕೊಂಡು, ದೂರವಾಣಿ ಮೂಲಕ ತನಗೆ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆಂದು ಆರೋಪಿಸಿ ಮೂರ್ತಿಯ ಮೊದಲ ಪತ್ನಿ ಸುಮಿತ್ರಾ ಅವರು ತೀರ್ಥಹಳ್ಳಿಯ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಬಂಧನವಾಗುವ ಸಾಧ್ಯತೆ ಇರುವುದನ್ನು ಮನಗಂಡ ವೆಂಕಟೇಶ್ ಮೂರ್ತಿ ತೀರ್ಥಹಳ್ಳಿ ತಾಲೂಕು ನ್ಯಾಯಾಲಯದಲ್ಲಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಮೂರ್ತಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.
ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧ ಸ್ನೇಹಿತ ವೆಂಕಟೇಶ್ ಮೂರ್ತಿ ಮತ್ತು ಚಂದ್ರಾವತಿ ದಂಪತಿಗಳು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ದೂರು ನೀಡಿ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಈ ಪ್ರಕರಣದ ವಿವಾದ ನಡೆಯುತ್ತಿರುವಾಗಲೇ, ಮೂರ್ತಿಯ ಮೊದಲ ಪತ್ನಿ ಸುಮಿತ್ರಾ ಅವರು ತನಗೆ ಮೋಸ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದರಿಂದಾಗಿ ಮೂರ್ತಿ ಇಕ್ಕಟ್ಟಿಗೆ ಸಿಲುಕಿದ್ದರು.
ತನಗೆ ವಿವಾಹ ವಿಚ್ಛೇದನ ನೀಡದಯೇ ಚಂದ್ರಾವತಿಯನ್ನು ಮೋಸದಿಂದ ವೆಂಕಟೇಶ್ ಮೂರ್ತಿ ವಿವಾಹ ಮಾಡಿಕೊಂಡಿರುವುದಾಗಿ ಸುಮಿತ್ರಾ ಹೇಳಿಕೆ ನೀಡಿ, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತ್ತು. ಇದರಿಂದ ಕಂಗಾಲಾದ ವೆಂಕಟೇಶ್ ಮೂರ್ತಿ ಮೊದಲ ಪತ್ನಿಗೆ ದೂರವಾಣಿ ಕರೆ ಮಾಡಿ, ನೀನು ಯಾಕೆ ಮಾಧ್ಯಮಗಳಿಗೆ ನನ್ನ ವಿಷಯ ಬಹಿರಂಗಗೊಳಿಸಿದೆ. ನಿನ್ನ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಒಡ್ಡಿದ್ದ. ಆ ನಂತರ ಸುಮಿತ್ರಾ ಮಾಲೂರು ಠಾಣೆಯಲ್ಲಿ ಮೂರ್ತಿಯ ವಿರುದ್ಧ ದೂರು ದಾಖಲಿಸಿದ್ದರು.