ಗೆಳೆಯನ ಪತ್ನಿಯನ್ನೇ ಅತ್ಯಾಚಾರಗೈದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹಾಲಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸುವ ವಿಚಾರ ಇಂದು (ಮೇ 13) ನಿರ್ಧಾರವಾಗಲಿದೆ.
ಮೇ 9ರಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಲಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಕಾರ್ಯ ಬುಧವಾರವೇ ನಡೆಯಬೇಕಿತ್ತು. ಆದರೆ ನ್ಯಾಯಾಲಯದ ಅನುಮತಿ ಸಿಗದ ಕಾರಣ ಬೆಂಗಳೂರಿಗೆ ಕರೆದೊಯ್ಯುವ ವಿಚಾರ ಅಲ್ಲಿಗೇ ನಿಂತಿತ್ತು.
ಹಾಲಪ್ಪನವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಕಾರಣ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯವಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕ ಡಾ.ಎಸ್.ಕೆ.ಮಹೇಂದ್ರಪ್ಪ ಜಿಲ್ಲಾ ಕಾರಾಗ್ರಹ ಅಧಿಕಾರಿಗಳಿಗೆ ವರದಿ ನೀಡಿದ್ದರು. ಈ ವರದಿಯನ್ನು ಆಧರಿಸಿ ಜಿಲ್ಲಾ ಕಾರಾಗೃಹ ಅಧಿಕಾರಿಗಳು ಜೈಲಿನ ವೈಜದ್ಯರ ಅಭಿಪ್ರಾಯದೊಂದಿಗೆ ನ್ಯಾಯಾಲಯದ ಅನುಮತಿ ಕೋರಿದ್ದರು. ಆದರೆ ಸಿಐಡಿ ಅಧಿಕಾರಿಗಳು ಮಾತ್ರ ಹಾಲಪ್ಪ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವುದು ನಿಜಕ್ಕೂ ಅಗತ್ಯವಿದೆಯೇ ಎಂದು ಪ್ರಶ್ನಿಸಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಬುಧವಾರ ಮಧ್ಯಾಹ್ನ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜೆಎಂಸಿ ನ್ಯಾಯಾಧೀಶ ರವಿಕಾಂತ್ ಅವರು, ಹಾಲಪ್ಪ ಅವರ ಆರೋಗ್ಯದ ವರದಿಯನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ ಎಂದು ತೀರ್ಪನ್ನು ಮೇ 13ಕ್ಕೆ ಕಾಯ್ದಿರಿಸಿದ್ದಾರೆ.