ಅತ್ಯಾಚಾರ ಆರೋಪ ಎದುರಿಸುತ್ತಿರುವ ಹರತಾಳು ಹಾಲಪ್ಪ, ರೇಣುಕಾಚಾರ್ಯ ಹಾಗೂ ಸಂಪಂಗಿ ಪ್ರಕರಣಗಳು ನಿಜಕ್ಕೂ ಬಿಜೆಪಿ ಮತ್ತು ಕಾರ್ಯಕರ್ತರಿಗೆ ಮುಜುಗರಕ್ಕೆ ಕಾರಣವಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರಕ್ಕೆ ಆಗಮಿಸಿದ್ದ ಸಚಿವ ಸುರೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಹಾಲಪ್ಪ ಪ್ರಕರಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಿಜಕ್ಕೂ ಈ ಘಟನೆಯಿಂದ ಪಕ್ಷ ಮತ್ತು ಕಾರ್ಯಕರ್ತರಿಗೆ ಮುಜುಗರಕ್ಕೀಡಾಗಿದೆ ಎಂದು ಹೇಳಿದರು.
ಸಾರ್ವಜನಿಕ ಬದುಕಿನಲ್ಲಿ ಇರುವವರು ಈ ರೀತಿಯಾಗಿ ಸಿಕ್ಕಿಹಾಕಿಕೊಂಡಾಗ ಅದಕ್ಕೆ ಸಾರ್ವಜನಿಕವಾಗಿ ಕೇಳುವ ಪ್ರಶ್ನೆಗೆ ಉತ್ತರ ಕೊಡಲು ಕಷ್ಟವಾಗುತ್ತದೆ. ಅದು ಹಾಲಪ್ಪ ಅವರ ಪ್ರಕರಣ ಇರಬಹುದು, ರೇಣುಕಾಚಾರ್ಯ-ನರ್ಸ್ ಜಯಲಕ್ಷ್ಮಿ ಪ್ರಕರಣ, ಸಂಪಂಗಿ ಲಂಚ ಪುರಾಣ ಇವೆಲ್ಲ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವುದು ಸತ್ಯ ಎಂದು ಆತ್ಮವಿಮರ್ಶೆ ಮಾಡಿಕೊಂಡರು.