ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಚಿವ ಸಂಪುಟಕ್ಕೆ ಭಾರಿ ಸರ್ಜರಿ ಮಾಡಲು ತೀರ್ಮಾಸಿದ್ದು, ವಿಧಾನಪರಿಷತ್ ಮತ್ತು ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಈ ನಿಟ್ಟಿನಲ್ಲಿ ಇಬ್ಬರು ಪಕ್ಷೇತರರು ಸೇರಿದಂತೆ ಒಟ್ಟು ಆರು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳು ಸೇರಿದಂತೆ ಒಟ್ಟು 8 ಮಂದಿ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸಂಪುಟದಿಂದ ಕೈ ಬಿಡಲಿರುವ ಹಾಗೂ ಸೇರ್ಪಡೆ ಮಾಡಿಕೊಳ್ಳಲಿರುವ ಪಟ್ಟಿಯನ್ನು ವರಿಷ್ಠರ ಗಮನಕ್ಕೆ ತರಲಾಗಿದ್ದು, ಹೈದರಾಬಾದ್ ಪ್ರವಾಸದ ಸಂದರ್ಭದಲ್ಲಿ ಈ ಬಗ್ಗೆ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ. ಇದರಂತೆ ಪಕ್ಷಕ್ಕೆ ನಿಷ್ಠರಾಗಿರುವ ಹಾಗೂ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ.
ಇದೇ ವೇಳೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿ. ಸೋಮಣ್ಣ ಸಂಪುಟ ಸೇರಲು ಉತ್ಸುಹಕರಾಗಿದ್ದು, ಅದಕ್ಕೆ ಪೂರಕ ವೇದಿಕೆ ಸಿದ್ಧಪಡಿಸಲು ಶಾಸಕರ ಮನವೊಲಿಕೆ ಕಾರ್ಯವೂ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.