ಅಕ್ರಮ ಗಣಿಗಾರಿಕೆ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ತಮಗೆ ಸಂತಸವಾಗಿದೆ ಎಂದು ಹೇಳುತ್ತಿರುವ ಗಣಿಕುಳ, ಸಚಿವ ಜನಾರ್ದನ ರೆಡ್ಡಿ ಸುಳ್ಳಿನ ಸರದಾರ ಎಂದು ಬಳ್ಳಾರಿಯ ತುಮಟಿ ಗಣಿ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದ್ದು, ರೆಡ್ಡಿ ಗಣಿ ವೀರಪ್ಪನ್ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿ ವಿವಾದ ಕುರಿತಂತೆ ಜನಾರ್ದನ ರೆಡ್ಡಿ ಸುಳ್ಳು ಹೇಳಿಕೆ ನೀಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ರಾಜ್ಯದ ಗಡಿ ಗುರುತು ನಾಶ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ತಮಗೆ ಸಂತಸವಾಗಿದ್ದು, ಒಎಂಸಿಯಿಂದ ಎಲ್ಲಿಯೂ ಗಣಿ ಒತ್ತುವರಿ ಆಗಿಲ್ಲ ಎಂದು ಜನಾರ್ದನ ರೆಡ್ಡಿ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಆ ನಿಟ್ಟಿನಲ್ಲಿ ಜನಾರ್ದನ ರೆಡ್ಡಿಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಟಪಾಲ್ ಗಣೇಶ್, ಜನಾರ್ದನ ರೆಡ್ಡಿ ಪೊಲೀಸರ ನೆರವಿನೊಂದಿಗೆ ರಾಜ್ಯದ ಗಡಿ ಗುರುತನ್ನು ನಾಶ ಮಾಡಿರುವುದಾಗಿ ದೂರಿದ ಅವರು, ಕೂಡಲೇ ರೆಡ್ಡಿ ಸಹೋದರರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಅಲ್ಲದೇ ಗಡಿ ಗುರುತು ಸಮೀಕ್ಷೆ ನಡೆಸಲು ಬಂದಿದ್ದ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಕೂಡ ಜನಾರ್ದನ ರೆಡ್ಡಿಗೆ ಸಾಥ್ ನೀಡಿದ್ದು, ಇದೀಗ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿ ಕೂಡ ರೆಡ್ಡಿಗಳ ಪರವಾಗಿಯೇ ಇದೆ ಎಂದು ಗಂಭೀರವಾಗಿ ಆರೋಪಿಸಿದರು.