ಹುದ್ದೆಯನ್ನು ಸರಿಯಾಗಿ ನಿಭಾಯಿಸಿಲ್ಲ: ಡಿಕೆಶಿ ಆತ್ಮವಿಮರ್ಶೆ!
ಬೆಂಗಳೂರು, ಗುರುವಾರ, 13 ಮೇ 2010( 18:14 IST )
NRB
'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬ ಗಾದೆ ಮಾತಿನಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ಸ್ವತಃ ತಮ್ಮ ಆತ್ಮವಿಮರ್ಶೆಗೆ ಇಳಿದಿದ್ದು, ತಾನು ಪಕ್ಷದ ಕಾರ್ಯಾಧ್ಯಕ್ಷನ ಸ್ಥಾನವನ್ನು ಸರಿಯಾಗಿ ನಿಭಾಯಿಸಿಲ್ಲ, ಅಲ್ಲದೇ ಕಟ್ಟುನಿಟ್ಟಾಗಿ ಪಕ್ಷವನ್ನೂ ಸಂಘಟಿಸಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಾಧ್ಯಕ್ಷನಾಗಿ ಶೇ.20ರಷ್ಟು ಸಾಧನೆ ಮಾಡಲೂ ನನ್ನಿಂದ ಆಗಿಲ್ಲ ಎಂದು ಹೇಳುವ ಮೂಲಕ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಗುಡ್ ಬೈ ಹೇಳುವ ಮುನ್ಸೂಚನೆಯನ್ನೂ ಕೊಟ್ಟಂತಾಗಿದೆ.
ಪ್ರಾಮಾಣಿಕವಾಗಿ ಹೇಳುವುದಾದ್ರೆ ನನ್ನ ಹುದ್ದೆಯ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸೋತಿದ್ದೇನೆ. ಆ ನೆಲೆಯಲ್ಲಿ ಹೈಕಮಾಂಡ್ ಸೂಚಿಸಿದರೆ ಆ ಸ್ಥಾನದಿಂದ ಕೆಳಗಿಳಿಯಲು ತಾನು ಸಿದ್ದ ಎಂಬುದಾಗಿಯೂ ಹೇಳಿದರು.
ಒಟ್ಟಾರೆ ದೆಹಲಿಯಲ್ಲಿ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ ಜತೆ ವರಿಷ್ಠರು ಬುಧವಾರ ಚರ್ಚೆ ನಡೆಸಿದ ಬೆನ್ನಲ್ಲೇ ಡಿಕೆಶಿ ಅವರ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಲಹಕ್ಕೆ ಎಡೆಮಾಡಿಕೊಟ್ಟಿದೆ.
ಇದು ಡಿಕೆಶಿ ಬುದ್ದಿವಂತಿಕೆ-ತೇಜಸ್ವಿನಿ: ತಾನು ಕಾರ್ಯಾಧ್ಯಕ್ಷನಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಡಿಕೆಶಿಯವರೇ ಹೇಳುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಅಲ್ಲದೇ ಡಿಕೆಶಿಯವರಿಗೆ ಇದು ಆತ್ಮವಿಮರ್ಶೆಯ ಕಾಲವಾಗಿದೆ ಎಂದು ಮಾಜಿ ಸಂಸದೆ ತೇಜಸ್ವಿನಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರೀಗ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಒಂದೇ, ಕೊಡದಿದ್ದರೂ ಒಂದೇ, ಯಾಕೆಂದರೆ ಇನ್ನು ಒಂದು ತಿಂಗಳಿನಲ್ಲಿಯೇ ಪಕ್ಷದ ಹುದ್ದೆಗಳಲ್ಲಿ ಬದಲಾವಣೆ ನಡೆಯಲಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡೇ ಡಿಕೆ ಶಿವಕುಮಾರ್ ಅವರು ಬುದ್ದಿವಂತಿಕೆಯಿಂದ ಈ ಹೇಳಿಕೆ ನೀಡಿರಬಹುದು ಎಂದು ತೇಜಸ್ವಿನಿ ತಿರುಗೇಟು ನೀಡಿದ್ದಾರೆ.