ಗೂಂಡಾಗಿರಿ, ಕೊಲೆಯಂತಹ ಘಟನೆ ಗ್ರಾಮಪಂಚಾಯತ್ ಚುನಾವಣೆಯಲ್ಲೂ ನಡೆಯತೊಡಗಿದ್ದು, ಅದಕ್ಕೆ ಉದಾಹರಣೆ ಎಂಬಂತೆ ಚುನಾವಣಾ ಅಕ್ರಮ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಅಕ್ಕನ ಮಗನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಯಡಕೊಳ ಗ್ರಾ.ಪಂ.ವ್ಯಾಪ್ತಿಯ ಸಿದ್ದರಾಮನಹುಂಡಿಯಲ್ಲಿ ಗುರುವಾರ ನಡೆದಿದೆ.
ಸಿದ್ದರಾಮಯ್ಯ ಅವರ ಅಕ್ಕ ಚಿಕ್ಕಮ್ಮ ಮತ್ತು ಸಣ್ಣೇಗೌಡ ಎಂಬವರ ಪುತ್ರ ಸಿದ್ದರಾಮನಹುಂಡಿ ಸಮೀಪದ ದೇವೇಗೌಡನ ಹುಂಡಿ ನಿವಾಸಿ ಚಿಕ್ಕಕೂಸಣ್ಣ(40) ಎಂಬವರು ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ವೇಳೆ ಕೆಲವರು ನಕಲಿ ಮತದಾನ ಮಾಡಿದ್ದಾರೆಂದು ಕೂಸಣ್ಣ ಬುಧವಾರ ಸಂಜೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು, ಗುಂಪೊಂದು ಕೂಸಣ್ಣ ಮೇಲೆ ಹಲ್ಲೆ ನಡೆಸಿತ್ತು. ಆಗ ಅವರ ಎದೆಗೆ ಗಂಭೀರವಾದ ಹೊಡೆತ ಬಿದ್ದಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು. ಏತನ್ಮಧ್ಯೆ ಗುರುವಾರ ಬೆಳಿಗ್ಗೆ ಮತ್ತೆ ಎದೆನೋವು ಹೆಚ್ಚಾಗಿ ಕೂಸಣ್ಣ ಸಾವನ್ನಪ್ಪಿದ್ದರು.
ತಮ್ಮ ಪತಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಕೂಸಣ್ಣ ಪತ್ನಿ ವಸಂತ ಅವರು ದೂರಿದ್ದಾರೆ. ಶವಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.