ರಕ್ಷಣೆ ಕೊಡಿ;ರೆಡ್ಡಿ ಬ್ರದರ್ಸ್ ಅಕ್ರಮ ಹೊರಹಾಕ್ತೇನೆ: ಆಂಜನೇಯ
ನವದೆಹಲಿ, ಶುಕ್ರವಾರ, 14 ಮೇ 2010( 12:25 IST )
ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ತನಗೆ ಸೂಕ್ತ ರಕ್ಷಣೆ ನೀಡಿದರೆ ರೆಡ್ಡಿ ಸಹೋದರರ ಕರ್ಮಕಾಂಡವನ್ನು ಹೊರಹಾಕಲು ಸಿದ್ದ ಎಂದು ಕಂಪನಿಯ ಮಾಜಿ ಅಧಿಕಾರಿ ವಿ.ಆಂಜನೇಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ರೆಡ್ಡಿ ಸಹೋದರರು ಗಣಿ ಅಕ್ರಮ ನಡೆಸಲು ಏನೆಲ್ಲಾ ಕಸರತ್ತು ನಡೆಸಿದ್ದಾರೆ ಎಂಬುದನ್ನು ತಾನು ಬಲ್ಲೆ. 27ಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಕಳ್ಳತನ ಮಾಡಿದ್ದನ್ನು ಪ್ರತ್ಯಕ್ಷವಾಗಿ ಕಂಡಿರುವುದಾಗಿ ಹೇಳಿರುವ ಆಂಜನೇಯ, ಗಡಿ ಗುರುತಿನ ಕಲ್ಲು ಕಿತ್ತೆಸೆದು ಇತರ ಕುರುಹುಗಳನ್ನು ನಾಶಪಡಿಸಿರುವುದನ್ನು ಖುದ್ದು ನೋಡಿರುವುದಾಗಿ ಆರೋಪಿಸಿದ್ದಾರೆ.
ರೆಡ್ಡಿ ಸಹೋದರರ ಅಕ್ರಮಗಳನ್ನು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಭಯ ಬಿದ್ದು ನನ್ನನ್ನು ಕೊಲ್ಲುವ ಬೆದರಿಕೆಯೂ ಹಾಕಿದ್ದರು. ಹಾಗಾಗಿ ತನಗೆ ಸೂಕ್ತ ರಕ್ಷಣೆ ನೀಡಿದಲ್ಲಿ ರೆಡ್ಡಿಗಳ ಅಕ್ರಮ ಬಯಲಿಗೆಳೆಯಲು ಸಿದ್ದ ಎಂದು ಸುಪ್ರೀಂಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಓಬಳಾಪುರಂ ಮೈನಿಂಗ್ ಕಂಪನಿಯ ಸೋದರ ಸಂಸ್ಥೆಯಾದ ಅಂತರ ಗಂಗಮ್ಮಕೊಂಡ ಮೈನಿಂಗ್ ಕಂಪನಿಯಲ್ಲಿ ಆಂಜನೇಯ 2006ರಿಂದ 2009ರ ತನಕ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.
ಭಾರತೀಯ ಮೈನಿಂಗ್ ಬ್ಯುರೋ ವರದಿಯ ಪ್ರಕಾರ ಓಬಳಾಪುರಂ ಮೈನಿಂಗ್ ಕಂಪನಿ ದಿನಕ್ಕೆ 11ಸಾವಿರ ಟನ್‌ಗಳಷ್ಟು ವಾಣಿಜ್ಯ ಗುಣಮಟ್ಟದ ಅದಿರನ್ನು ಹೊರತೆಗೆಯಲು ಬಂದಿತ್ತು. ಆದರೆ ಒಎಂಸಿ ದಿನಂಪ್ರತಿ 25ಸಾವಿರ ಟನ್‌ಗಳಷ್ಟು ಅದಿರನ್ನು ಹೊರತೆಗೆದ ಅಕ್ರಮಗಳಕ್ಕೆ ತಾನು ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದ್ದಾರೆ.
ಆ ನಿಟ್ಟಿನಲ್ಲಿ ತಾನು ರೆಡ್ಡಿ ಸಹೋದರರ ಅಕ್ರಮ ಬಯಲಿಗೆ ಎಳೆಯಲು ನಿರ್ಧರಿಸಿರುವ ನನಗೆ ಮತ್ತು ಕುಟುಂಬ ವರ್ಗಕ್ಕೆ ರಕ್ಷಣೆ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಆಂಜನೇಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.