ಓಬಳಾಪುರಂ ಮೈನ್ಸ್ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬೆನ್ನಲ್ಲೇ ಬಳ್ಳಾರಿಯ ತುಮಟಿ ಗಣಿ ಮಾಲೀಕ ಟಪಾಲ್ ಗಣೇಶ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಸುಪ್ರೀಂ ತೀರ್ಪಿನಲ್ಲಿ ಸಚಿವ ಜನಾರ್ದನ ರೆಡ್ಡಿಗೆ ಕ್ಲೀನ್ ಚಿಟ್ ನೀಡಿಲ್ಲ. ಸರ್ವೆ ಆಫ್ ಇಂಡಿಯಾ ಕೆಲವು ತಪ್ಪು ಮಾಡಿದ್ದು, ಆ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೆ ಆಫ್ ಇಂಡಿಯಾದ ಅಧಿಕಾರಿ ಕೆ.ಎಸ್.ರೆಡ್ಡಿ ಎಂಬುವವರು ಸಾಕಷ್ಟು ತಪ್ಪು ಮಾಡಿದ್ದಾರೆ. ಅವರನ್ನು ಜನಾರ್ದನ ರೆಡ್ಡಿ ದಿಕ್ಕು ತಪ್ಪಿಸಿದ್ದಾರೆ. ಈ ಎಲ್ಲಾ ವಿವರಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗುತ್ತದೆ ಎಂದರು.
ಅಲ್ಲದೆ, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಗಡಿಯನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಇದೇ ವೇಳೆ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಹರಿಹಾಯ್ದ ಟಪಾಲ್ ಗಣೇಶ್, ಗಣಿ ಕ್ಷೇತ್ರದಲ್ಲಿ ಅವರು ನಿಜಕ್ಕೂ ಒಬ್ಬ ದೊಡ್ಡ ವೀರಪ್ಪನ್, ನೈತಿಕತೆ ಇದ್ದರೆ ಕೂಡಲೇ ರೆಡ್ಡಿ ಸಹೋದರರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ.