ಇಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ನಡೆದ ಆರು ಸಾವಿಗೆ ನಕಲಿ ಮದ್ಯ ಸೇವನೆಯೇ ಕಾರಣ ಎಂದು ಅಬಕಾರಿ ಸಚಿವರಾದ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಾವಿಗೆ ನಕಲಿ ಮದ್ಯವೇ ಕಾರಣ ಎಂಬ ಸ್ಥಳೀಯರು ಹಾಗೂ ಮಾಧ್ಯಮಗಳ ಆರೋಪವನ್ನು ಈವರೆಗೂ ತಳ್ಳಿ ಹಾಕುತ್ತಿದ್ದ ಅಧಿಕಾರಿಗಳಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ. ನಗರಕ್ಕೆ ಭೇಟಿ ನೀಡಿದ ಸಚಿವರು ನಕಲಿ ಮದ್ಯದ ಬಾಟಲುಗಳಲ್ಲಿ ಸೀಲು ಇಲ್ಲದಿರುವುದನ್ನು ಮಾಧ್ಯಮಕ್ಕೆ ತೋರಿಸಿದ್ದಾರೆ. ಇದರಿಂದ ನಕಲಿ ಮದ್ಯ ಸೇವನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಯಾವ ಭಾಗದಲ್ಲೂ ನಡೆಯದ ಈ ಘಟನೆ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಇಲ್ಲಿ ನಡೆದಿದೆ. ಈ ಭಾಗದಲ್ಲಿ ಬಾಟಲಿಯೊಳಗೆ ನಕಲಿ ಮದ್ಯ ತುಂಬಿಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ಇದೇ ವೇಳೆ ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಬೇಕೆನ್ನುವ ಜಿಲ್ಲಾಧಿಕಾರಿ ಆದೇಶವನ್ನು ಸಮರ್ಥಿಸಿಕೊಂಡ ಅವರು, ಯಾರಾದರೂ ಮದ್ಯ ಹಂಚಿದ ಗುಮಾನಿ ಬಂದರೆ ಅಂಥವರನ್ನು ಕರೆದು ವಿಚಾರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದ್ದಾರೆ.
ನಕಲಿ ಮದ್ಯ ಕುಡಿದು ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಪರಿಹಾರವಿಲ್ಲ ಎಂದು ತಿಳಿಸಿದ ಅವರು, ಆದರೆ ನಾನು ವೈಯಕ್ತಿಕ ಪರಿಹಾರ ನೀಡುತ್ತೇನೆ ಎಂದರು.