ಅಕ್ರಮ ಗಣಿಗಾರಿಕೆ ವಿವಾದ ಕುರಿತಂತೆ ಸಚಿವ ಜನಾರ್ದನ ರೆಡ್ಡಿ ಇದೀಗ ರಾಜ್ಯಪಾಲರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ರಾಜ್ಯಪಾಲರ ಕಚೇರಿ ಕೋರ್ಟ್ ಅಲ್ಲ, ಅವರಿಗೆ ನೋಟಿಸ್ ನೀಡುವ ಅಧಿಕಾರವೂ ಇಲ್ಲ ಎಂದು ಗುಡುಗಿದ್ದಾರೆ.
ಜನಾರ್ದನ ರೆಡ್ಡಿ ಸಹೋದರರು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ರೆಡ್ಡಿಗೆ ನೋಟಿಸ್ ನೀಡಿದ್ದರು.
ನೋಟಿಸ್ ಹಿನ್ನೆಲೆಯಲ್ಲಿ ರೆಡ್ಡಿ ಪರ ವಕೀಲರು ರಾಜಭವನಕ್ಕೆ ಹಾಜರಾಗಿ ವಿವರಣೆ ನೀಡಿದ್ದರು. ಅಲ್ಲದೇ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದ್ದರು. ಏತನ್ಮಧ್ಯೆ ಗಣಿ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ವಿವಾದ ರಹಿತ ಸ್ಥಳದಲ್ಲಿ ಗಣಿಗಾರಿಕೆ ನಡೆಸುವಂತೆ ರೆಡ್ಡಿಗೆ ಗ್ರೀನ್ ಸಿಗ್ನಲ್ ನೀಡಿತ್ತು.
ಆ ಕಾರಣಕ್ಕಾಗಿಯೇ ರಾಜ್ಯಪಾಲರ ಕ್ರಮದ ವಿರುದ್ದ ಪರೋಕ್ಷವಾಗಿ ಹರಿಹಾಯ್ದಿರುವ ಜನಾರ್ದನ ರೆಡ್ಡಿ, ಸುಪ್ರೀಂಗಿಂತ ರಾಜ್ಯಪಾಲರು ದೊಡ್ಡವರಲ್ಲ ಎಂಬ ಅಭಿಪ್ರಾಯದೊಂದಿಗೆ ಕಾನೂನು ಸಮರ ನಡೆಸುವ ಮುನ್ಸೂಚನೆ ಕೊಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖತಃ ಅಥವಾ ವಕೀಲರ ಮೂಲಕ ರಾಜರಾಗುವಂತೆ ರಾಜ್ಯಪಾಲರು ನನಗೆ ನಿರ್ದೇಶನ ನೀಡಿರುವುದು ಸಂವಿಧಾನಬದ್ಧವಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಪಾಲರು ಹಿರಿಯ ವಕೀಲರು, ಕೇಂದ್ರದ ಕಾನೂನು ಸಚಿವರಾಗಿ ಅನುಭವ ಹೊಂದಿದವರು. ಆದರೆ ಅಂಥ ರಾಜ್ಯಪಾಲರನ್ನು ಕೂಡ ಮೈನ್ಸ್ ವೀರಪ್ಪನ್ ರಾಹುಲ್ ಬಲ್ಡೋಟಾ ಅವರ ಏಜೆಂಟ್ ಕೆಸಿ ಕೊಂಡಯ್ಯ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಎಂದು ದೂರಿದರು.