ಕೋಮು ದಳ್ಳುರಿ ಎಬ್ಬಿಸಲು ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಲಂಚ ಸ್ವೀಕರಿಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ, ಹುಬ್ಬಳ್ಳಿ-ಧಾರವಾಡದಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸೇನೆಗೆ ಗುಡ್ ಬೈ ಹೇಳಿದ್ದಾರೆ.
ಬಜರಂಗದಳ ತೊರೆದು ಶ್ರೀರಾಮಸೇನೆ ಹುಟ್ಟು ಹಾಕಿದ ದಿನದಿಂದ ಮುತಾಲಿಕ್ ಅವರ ಜೊತೆಗಿದ್ದ ನಾವೆಲ್ಲ ಈಗ ಶ್ರೀರಾಮಸೇನೆಯನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ಶ್ರೀರಾಮಸೇನೆಯ ಸಂಘಟನಾ ಕಾರ್ಯದರ್ಶಿ ಕೃಷ್ಣಾ ಗಂಡಗಾಳೆಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಾವಿರಕ್ಕೂ ಅಧಿಕ ಶ್ರೀರಾಮಸೇನಾ ಕಾರ್ಯಕರ್ತರು ಮೇಯರ್ ವೆಂಕಟೇಶ್ ಮೇಸ್ತ್ರಿ ಮತ್ತು ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ್ ತೆಂಗಿನಕಾಯಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮುತಾಲಿಕ್ ಪ್ರಕರಣಕ್ಕೂ ತಾವು ಬಿಜೆಪಿ ಸೇರುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿರುವ ಕೃಷ್ಣಾ, ಹಿಂದೆ ಇದಕ್ಕಿಂತ ದೊಡ್ಡ ಹಗರಣಗಳಲ್ಲಿ ಅವರು ಸಿಲುಕಿದ್ದನ್ನು ಕಂಡು ನಾವೆಲ್ಲ ಶ್ರೀರಾಮಸೇನೆ ತೊರೆಯಲು ನಿರ್ಧರಿಸಿದ್ದೇವು. ಆ ನಿಟ್ಟಿನಲ್ಲಿ ಹಿಂದುತ್ವದ ಪಾಲನೆಗೆ ನಿಷ್ಠವಾಗಿರುವ ಬಿಜೆಪಿ ಸೇರಲು ನಾವು ಈಗ ನಿರ್ಧರಿಸಿರುವುದಾಗಿ ಕೃಷ್ಣಾ ವಿವರಣೆ ನೀಡಿದ್ದಾರೆ.
ಹಣದ ಆಮಿಷಕ್ಕೆ ಬಲಿಯಾಗಿ ಬಿಜೆಪಿ ಸೇರ್ಪಡೆ-ಮುತಾಲಿಕ್: ಹುಬ್ಬಳ್ಳಿ-ಧಾರವಾಡದ ಶ್ರೀರಾಮಸೇನೆಯ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್, ಹಣದ ಆಮಿಷಕ್ಕೆ ಬಲಿಯಾಗಿ ಅವರೆಲ್ಲ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೆಲವು ಕಾರ್ಯಕರ್ತರ ನಿರ್ಗಮನದಿಂದ ಸಂಘಟನೆಗೆ ಯಾವುದೇ ನಷ್ಟವಿಲ್ಲ ಎಂದು ತಿಳಿಸಿದ್ದಾರೆ.