ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಗೆ ರಾಜ್ಯಪಾಲರು ನೀಡಿರುವ ನೋಟಿಸ್‌ಗೆ ಕಾನೂನಿನ ಪರಿಜ್ಞಾನವೇ ಇಲ್ಲದಂತೆ ಬೇಜವಾಬ್ದಾರಿಯಿಂದ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಸಚಿವರಿಗೆ ನೋಟಿಸ್ ನೀಡಲು ರಾಜ್ಯಪಾಲರಿಗೆ ಯಾವುದೇ ಅಧಿಕಾರ ಇಲ್ಲ, ಅವರು ಕೋರ್ಟ್ ಅಥವಾ ಸುಪ್ರೀಂಕೋರ್ಟ್ ಅಲ್ಲ. ಆದ್ದರಿಂದ ಅವರ ನೋಟಿಸ್‌ಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದಿದ್ದಾರೆ. ಇವರ ಈ ಹೇಳಿಕೆಯಿಂದ ಜನಾರ್ದನ ರೆಡ್ಡಿಗೆ ಕಾನೂನಿನ ಪರಿಜ್ಞಾನ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಕಿಡಿಕಾರಿದ್ದಾರೆ.
ರಾಜ್ಯಪಾಲರು ಕಾನೂನು ಪಂಡಿತರು, ಮಾಜಿ ಕಾನೂನು ಸಚಿವರು. ಅವರ ಬಗ್ಗೆ ಅಪಾರ ಗೌರವವಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಕಾನೂನು ಪಂಡಿತರಾಗಿರುವ ರಾಜ್ಯಪಾಲರು ಕಾನೂನನ್ನು ಅರಿತೇ ನೋಟಿಸ್ ಜಾರಿಗೊಳಿಸಿದ್ದಾರೆ ಎಂಬುದನ್ನು ರೆಡ್ಡಿ ಅರಿಯಬೇಕು ಮತ್ತು ರಾಜ್ಯಪಾಲರ ಮೇಲೆ ಆರೋಪ ಮಾಡುವ ಮೂಲಕ ಅವರು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ಮಾತ್ರ ಪ್ರಕಟಿಸಿದೆ. ಅಂತಿಮ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ. ಹೀಗಿದ್ದಾಗ ನಾನು ನಿರಪರಾಧಿ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆ. ಸುಪ್ರೀಂಕೋರ್ಟ್ ಗಣಿಗಾರಿಕೆಗೆ ಅನುಮತಿ ನೀಡಿದೆ ಎಂದೆಲ್ಲಾ ಸುಳ್ಳು ಮಾಹಿತಿ ನೀಡಿರುವುದು ಹಾಸ್ಯಾಸ್ಪದ ಎಂದು ಪೂಜಾರಿ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸಿದ ಸಚಿವರ ವಿರುದ್ಧ ವಿಚಾರಣೆ ನಡೆಯುತ್ತಿರುವಾಗ ಮುಖ್ಯಮಂತ್ರಿ ಅವರನ್ನು ರಕ್ಷಿಸಲು ಮುಂದಾಗಿದ್ದರು. ಇದರಿಂದಾಗಿ ಅಕ್ರಮ ಗಣಿಗಾರಿಕೆ ಬಗ್ಗೆ ಮುಖ್ಯಮಂತ್ರಿಗಳು ಕೂಡಾ ನೈತಿಕ ಹೊಣೆ ಹೊರಬೇಕಾಗುತ್ತದೆ ಎಂದು ಪೂಜಾರಿ ಆರೋಪಿಸಿದರು.