ಸಚಿವ ಜನಾರ್ದನ ರೆಡ್ಡಿ ವಿರುದ್ಧ ಟೀಕಾಪ್ರಹಾರ ನಡೆಸಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿದ್ದಾರೆಂದು ರಾಜ್ಯಸಭಾ ಸದಸ್ಯ ವೆಂಕಯ್ಯನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಚಿತ್ರಕಲಾ ಪರಿಷತ್‌ನಲ್ಲಿ ಕಲಾವಿದರ ಸಮಾಲೋಚನಾ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆಡಳಿತದ ಬಗ್ಗೆ ನ್ಯಾಯ ನಿರ್ಣಯ ಕೊಡುವವರು ಜನರೆ ಹೊರತು ರಾಜ್ಯಪಾಲರಲ್ಲ ಎಂದರು.
ಕ್ಷುಲ್ಲಕ ವಿಷಯಗಳ ಮೇಲೆ ಆಡಳಿತ ಚಕಾರದ ವಿರುದ್ಧ ಹೇಳಿಕೆ ನೀಡಿ ಅನಗತ್ಯ ವಿವಾದ ಹುಟ್ಟು ಹಾಕುವುದು ರಾಜ್ಯಪಾಲರ ಘನತೆಗೆ ತಕ್ಕದ್ದಲ್ಲ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಯ ಚಿಂತನೆಗಳನ್ನು ಇಟ್ಟುಕೊಳ್ಳಬೇಕೆ ಹೊರತು ಕಾಂಗ್ರೆಸ್ ವಕ್ತಾರರಂತೆ ವರ್ತಿಸಿ ಬಿಜೆಪಿ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದ ಅವರು, ತಾವೇ ನ್ಯಾಯಾಧೀಶರಾಗಿ ತೀರ್ಮಾನ ಕೊಡುವುದು ಸೂಕ್ತವಲ್ಲ ಎಂದು ತಿಳಿಸಿದರು. ಇನ್ನು ಮುಂದಾದರೂ ರಾಜ್ಯಪಾಲರು ಜನಪ್ರತಿನಿಧಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.