ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಅವರ ನಡತೆ ಸರಿಯಾಗಿರುವಂತೆ ನೋಡಿಕೊಳ್ಳಬೇಕೆಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀತಿಪಾಠ ಹೇಳಿದ್ದಾರೆ.
ರಾಜ್ಯಪಾಲರ 74ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಹೇಳಲು ರಾಜಭವನಕ್ಕೆ ಸೋಮವಾರ ಬಂದಿದ್ದ ಯಡಿಯೂರಪ್ಪ ಅವರನ್ನು ಸುಮಾರು ಅರ್ಧಗಂಟೆ ಕೂರಿಸಿಕೊಂಡಿದ್ದ ರಾಜ್ಯಪಾಲರು ನೀತಿಪಾಠ ಹೇಳಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ತಮ್ಮ ಬಗ್ಗೆ ಉದ್ಧಟತನದ ಮಾತುಗಳನ್ನಾಡಿರುವ ಸಚಿವ ಜನಾರ್ದನ ರೆಡ್ಡಿ ವಿಚಾರವನ್ನು ಪ್ರಸ್ತಾಪಿಸಿದ ಭಾರದ್ವಾಜ್, ಸಚಿವರ ನಡತೆ ತಿದ್ದಿಕೊಳ್ಳುವಂತೆ ಸೂಚಿಸಬೇಕೆಂದು ಯಡಿಯೂರಪ್ಪ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ.
ಯಡಿಯೂರಪ್ಪ ಅವರೊಂದಿಗೆ ಸಚಿವರಾದ ಸುರೇಶ್ ಕುಮಾರ್, ಕಟ್ಟಾ ಸುಬ್ರಮಣ್ಯ ನಾಯ್ಡು, ಆರ್.ಅಶೋಕ್, ಮುರುಗೇಶ್ ನಿರಾಣಿ, ಸಂಸದ ಪಿ.ಸಿ.ಮೋಹನ್ ಅವರು ಜೊತೆಗಿದ್ದರು.