ರಾಜ್ಯಪಾಲರು ತಮ್ಮ ಇತಿಮಿತಿಯನ್ನರಿತು ಕಾರ್ಯನಿರ್ವಹಿಸಬೇಕೆಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಡ್ಡಿ ಸಹೋದರರಿಗೆ ನೋಟಿಸ್ ಜಾರಿ ಮಾಡಿರುವ ರಾಜ್ಯಪಾಲರ ಕ್ರಮವನ್ನು ಪ್ರಸ್ತಾಪಿಸಿ, ರಾಜ್ಯಪಾಲರು ಸಂವಿಧಾನದ ಇತಿಮಿತಿಯಲ್ಲಿ ಕಾರ್ಯನಿರ್ವಹಿಸಬೇಕೆ ಹೊರತು, ರಾಜಕಾರಣ ಮಾಡಬಾರದೆಂದು ಕಿಡಿಕಾರಿದರು.
ಈ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಈಶ್ವರಪ್ಪ ಅವರು, ರೆಡ್ಡಿ ಸಹೋದರರಿಗೆ ಗಣಿಗಾರಿಕೆಯೇ ಉದ್ಯಮವಾಗಿದ್ದು, ಸರ್ಕಾರದಿಂದ ಅನುಮತಿ ಪಡೆದೇ, ಕಾನೂನು ಬದ್ಧವಾಗಿ ನಿರ್ದಿಷ್ಟ ಸ್ಥಳದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರೆಡ್ಡಿ ಸಹೋದರರು ಎಲ್ಲೂ ಕೂಡ ಅಕ್ರಮ ಗಣಿಗಾರಿಕೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ರೆಡ್ಡಿ ಸಹೋದರರು ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದವರು ಸೇರಿದಂತೆ ಅನೇಕರು ಹಲವಾರು ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.