ಜಾತಿ ಪದ್ಧತಿ ಕ್ಯಾನ್ಸರ್ ಇದ್ದಂತೆ, ಇದನ್ನು ಬುಡ ಸಮೇತ ನಾಶ ಪಡಿಸದ ಹೊರತು ಸಮಾಜ ಸುಧಾರಣೆಯಾಗುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಸವೇಶ್ವರ ವೃತ್ತದಲ್ಲಿ ವೀರಶೈವ ಮಹಾಸಭಾ ಮತ್ತು ಬಸವ ಬಳಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಾನಾ ಜಾತಿಗಳಿದ್ದು, ದೇಶದ ಪ್ರಗತಿಗೆ ಮಾರಕವಾಗಿದೆ. ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ಜನರಲ್ಲಿ ಅಚ್ಚಳಿಯದೇ ಉಳಿದಿರುವುದರಿಂದ ಸಮಾನತೆ ಸಾಧಿಸಲು ಸಾಧ್ಯವಿಲ್ಲ ಎಂದರು.
12ನೇ ಶತಮಾನದಲ್ಲಿಯೇ ಜಾತಿ ಪದ್ಧತಿ ವಿರುದ್ಧ ಬಸವಣ್ಣನವರು ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ಸಮಾನತೆ ತರುವುದರ ಮೂಲಕ ಸರ್ವರಿಗೂ ಸಮಪಾಲು ಎಂದು ಪ್ರತಿಪಾದಿಸಿ ಕ್ರಾಂತಿಯನ್ನೇ ಮಾಡಿದರು. ಅವರು ಸಮಾಜಕ್ಕೆ ನೀಡಿರುವ ಈ ಸಂದೇಶ ಇಂದಿಗೂ ಪ್ರಸ್ತುತ ಎಂದರು.