ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಿಂದುಳಿದವರ ಅಭಿವೃದ್ಧಿಗೆ ಕಾಂಗ್ರೆಸ್ ಏನು ಮಾಡಿದೆ?: ಈಶ್ವರಪ್ಪ (Congress | BJP | Ishwarappa | Siddaramaiah | Yeddyurappa | JDS)
ಹಿಂದುಳಿದವರ ಅಭಿವೃದ್ಧಿಗೆ ಕಾಂಗ್ರೆಸ್ ಏನು ಮಾಡಿದೆ?: ಈಶ್ವರಪ್ಪ
ಬೆಂಗಳೂರು, ಬುಧವಾರ, 19 ಮೇ 2010( 11:18 IST )
ಆಡಳಿತಾರೂಢ ಬಿಜೆಪಿ ವಿರುದ್ಧ ಸದಾ ಟೀಕಾಪ್ರಹಾರ ನಡೆಸುತ್ತಿದ್ದ ವಿಪಕ್ಷ ಕಾಂಗ್ರೆಸ್ ಧೋರಣೆ ಬಗ್ಗೆ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಏನು ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಏರ್ಪಡಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಸನ್ಮಾನ ಸಮಾರಂಭದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಮುಖಂಡರಾದ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ವೀರಪ್ಪ ಮೊಯ್ಲಿ ಅವರ ಅಂತಃಸತ್ವ ಸತ್ತುಹೋಗಿದೆಯೇ? ಎಂದು ಪ್ರಶ್ನಿಸಿರುವ ಅವರು, ಹಿಂದುಳಿದ ವರ್ಗಗಳ ಹೆಸರಲ್ಲಿ ಕೇವಲ ರಾಜಕಾರಣ ಮಾಡಿದ ಕಾಂಗ್ರೆಸ್ ಇದೀಗ ಈ ವರ್ಗಕ್ಕೆ ಮುಳುವಾಗುವಂತಹ ರಂಗನಾಥ ಮಿಶ್ರಾ ಆಯೋಗದ ವರದಿ ಜಾರಿಗೆ ತರಲು ಹುನ್ನಾರ ನಡೆಸುತ್ತಿರುವುದನ್ನು ಕಾಂಗ್ರೆಸ್ ನಾಯಕರು ಕೈಕಟ್ಟಿ ಕುಳಿತು ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಈಗಲೂ ಹೆಣ್ಣುಮಕ್ಕಳಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ. ಅವರ ಮತಗಳನ್ನು ಪಡೆದು ಮಜಾ ಮಾಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟೇ ಬೊಬ್ಬೆ ಹೊಡೆದರೂ ಬಿಜೆಪಿ ಸರ್ಕಾರ ಮಠಮಾನ್ಯಗಳಿಗೆ ದುಡ್ಡು ಕೊಡುತ್ತಲೇ ಇರುತ್ತದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿದ್ದ ಕಾಂಗ್ರೆಸ್ ಪಕ್ಷವೇ ಈಗಿನ ಬಿಜೆಪಿ ಪಕ್ಷ ಎಂದರು.
ಅಲ್ಲದೇ ಕೇಂದ್ರ ಸರ್ಕಾರ ರಂಗನಾಥ್ ಮಿಶ್ರಾ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದನ್ನು ವಿರೋಧಿಸಿ ಜುಲೈ ತಿಂಗಳಿನಿಂದ ಜಿಲ್ಲಾವಾರು ಹಾಗೂ ರಾಷ್ಟ್ರವ್ಯಾಪಿ ಹೋರಾಟ ನಡೆಸುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಈ ಸಂದರ್ಭದಲ್ಲಿ ತಿಳಿಸಿದರು.