ಆಡಳಿತಾರೂಢ ಬಿಜೆಪಿ ಮುಖಂಡರ ಹಾಗೂ ರಾಜ್ಯಪಾಲ ಭಾರದ್ವಾಜ್ ನಡುವಿನ ಜಟಾಪಟಿ ಮುಂದುವರಿದಿದ್ದು, ನಾನು ಕಾಂಗ್ರೆಸ್ಸಿಗ ಹೌದು, ಆದರೆ ರಾಜ್ಯಪಾಲನಾದ ನಂತರ ಸಂವಿಧಾನದ ಪಾಲಕನಾಗಿ ಕಾರ್ಯನಿರ್ವಹಿಸಬೇಕೆ ವಿನಃ ಪಕ್ಷದ ವಕ್ತಾರನಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಇದೆಲ್ಲಾ ತಿಳಿದೂ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡಿದರೆ ಏನು ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಗಣಿ ಮಾಲೀಕ, ಸಚಿವ ಜನಾರ್ದನ ರೆಡ್ಡಿಗೆ ವಿವರಣೆ ಕೇಳಿ ರಾಜ್ಯಪಾಲ ಭಾರದ್ವಾಜ್ ಅವರು ನೋಟಿಸ್ ನೀಡಿರುವುದಕ್ಕೆ, ರಾಜ್ಯಪಾಲರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆಂದು ಬಿಜೆಪಿ ಮುಖಂಡರು ಆರೋಪಿಸಿದ್ದಕ್ಕೆ ಮಂಗಳವಾರ ರಾಜ್ಯಪಾಲರು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯಿಸಿದರು.
ರಾಜ್ಯಪಾಲನಾಗಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಯಾವುದೇ ಮಂತ್ರಿ ಅಥವಾ ಬಿಜೆಪಿ ಮುಖಂಡರ ಹೇಳಿಕೆಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಕಿಡಿಕಾರಿದರು.
ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿದರೆ, ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುತ್ತೇನೆ ಎಂದರು. ಗಣಿಗಾರಿಕೆ ಹೇಗೆ ನಡೆಯುತ್ತಿದೆ, ಏನು ನಡೆಯುತ್ತಿದೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತು. ಜನಾಭಿಪ್ರಾಯಕ್ಕೆ ಗೌರವ ಕೊಟ್ಟು ನಾನು ನೋಟಿಸ್ ನೀಡಿದ್ದೇನೆ ಎಂದು ಸಮರ್ಥನೆ ನೀಡಿದರು.