ಶೀಘ್ರವೇ ಸಂಪುಟ ಪುನಾರಚನೆ ಆಗಲಿದ್ದು, ಪ್ರತಿ ಜಿಲ್ಲೆಗೂ ಅದೇ ಜಿಲ್ಲೆಯ ಶಾಸಕರನ್ನು ಸಚಿವರನ್ನಾಗಿಸಬೇಕು ಎನ್ನುವುದು ಪಕ್ಷದ ಅಪೇಕ್ಷೆ. ಖಾಲಿ ಇರುವ 2 ಸ್ಥಾನಕ್ಕೆ ಸೂಕ್ತರನ್ನು ತುಂಬಲಾಗುತ್ತದೆ. ಈ ಬಾರಿ ಮೈಸೂರಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಮರ್ಥಿಸಿಕೊಂಡಿರುವ ಅವರು, `ಮೊದಲಿನಿಂದಲೂ ಹಲವು ಲಾಬಿಗಳು ಕೆಲಸ ಮಾಡುತ್ತಾ ಬಂದಿವೆ. ರಾಜಕಾರಣಿಗಳು ವ್ಯವಹಾರ ಮಾಡಬಾರದು ಎಂದೇನೂ ಇಲ್ಲ. ವ್ಯವಹಾರ ನಡೆಸಲು ರಾಜಕಾರಣಗಳಿಗೂ ಎಲ್ಲ ರೀತಿಯ ಸ್ವಾತಂತ್ರ್ಯ ಇದೆ ಎಂದು ಹೇಳಿದ್ದಾರೆ.
ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹಾಗೂ ಸಚಿವ ಜನಾರ್ದನ ರೆಡ್ಡಿ ಅವರ ನಡುವಿನ ಗಲಾಟೆ ಗಣಿ ವ್ಯಾಪಾರಕ್ಕೆ ಸಂಬಂಧಿಸಿದ್ದೇ ಹೊರತು ಸರಕಾರದ ಜತೆಗಿನ ಸಂಘರ್ಷವಲ್ಲ. ಆದರೂ ಈ ಬೆಳವಣಿಗೆಗಳು ಸರಿಯೋ ತಪ್ಪೋ ಎಂದು ಹೇಳಲು ಇಚ್ಛಿಸುವುದಿಲ್ಲ. ಸೌಹಾರ್ದಯುತವಾಗಿ ವಿವಾದ ಬಗೆಹರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಗಣಿಗಾರಿಕೆಯನ್ನು ಯಾರು ಮಾಡುತ್ತಿಲ್ಲ. ಹಿಂದೆ ಕಾಂಗ್ರೆಸ್‌ನವರು ಮಾಡಿಲ್ಲವೇ, ಲಿಕ್ಕರ್ ಲಾಬಿ, ಗಣಿ ಲಾಬಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ರಾಜಕಾರಣಿಗಳು ವ್ಯವಹಾರ ನಡೆಸುವುದು ಹೊಸದೇನೂ ಅಲ್ಲ. ವ್ಯವಹಾರಕ್ಕೆ ಎಲ್ಲಾ ರೀತಿಯ ಅವಕಾಶವಿದೆ, ಎಂದರು.
ಗಣಿ ರೆಡ್ಡಿಗಳು ತೆರಿಗೆ ವಂಚನೆ ಮಾಡಿದ್ದರೆ, ಇಲ್ಲವೇ ಅಕ್ರಮ ನಡೆಸುತ್ತಿದ್ದರೆ ಸರ್ವೋಚ್ಚ ನ್ಯಾಯಾಲಯ ಶಿಕ್ಷೆ ವಿಧಿಸಲಿ, ರಾಜ್ಯ ಸರಕಾರ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ. 60 ಸಾವಿರ ಗ್ರಾಪಂ ಸದಸ್ಯರು, 60 ಸಾವಿರ ಸಹಕಾರ ಸಂಘಗಳ ಪ್ರತಿನಿಗಳು ಪಕ್ಷದ ಬೆಂಬಲದಿಂದ ಆಯ್ಕೆಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯಪಾಲರು ರಾಜಕಾರಣ ಮಾಡಬಾರದು ಎಂದು ಸಲಹೆ ನೀಡಿದರು.