ರಾಜ್ಯದ ದಕ್ಷಿಣ ಕರಾವಳಿ ಭಾಗ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ 48 ಗಂಟೆಯೊಳಗೆ ಲೈಲಾ ಚಂಡಮಾರುತ ಪ್ರವೇಶಿಸಲಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲೈಲಾ ಚಂಡಮಾರುತ ರಾಜ್ಯದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವುದರಿಂದ ಭಾರೀ ಗಾಳಿ-ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ವಿವರಣೆ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈಗಾಗಲೇ ಬಿರುಗಾಳಿ ಬೀಸುತ್ತಿದೆ. ಕಳೆದ ವರ್ಷದ ವರುಣನ ಅಬ್ಬರಕ್ಕೆ ಮನೆ, ಮಠ ಕಳೆದುಕೊಂಡಿದ್ದ ನಿರಾಶ್ರಿತರ ತಾತ್ಕಾಲಿಕ ಶೆಡ್‌ಗಳು ಬುಧವಾರ ಬೀಸಿದ ಗಾಳಿಗೆ ಹಾರಿಹೋಗಿದೆ. ಇದೀಗ ಅವರೆಲ್ಲ ಬಯಲಿನಲ್ಲಿಯೇ ದಿನಕಳೆಯುವಂತಾಗಿದೆ.
ಲೈಲಾ ಚಂಡಮಾರುತ ಈಗಾಗಲೇ ಕೇರಳ, ತಮಿಳುನಾಡು ಪ್ರವೇಶಿಸಿದ್ದು, ಭಾರೀ ಪ್ರಮಾಣದ ಗಾಳಿ-ಮಳೆ ಸುರಿಯುತ್ತಿದ್ದು, ಇಂದು ರಾತ್ರಿ ಆಂಧ್ರಪ್ರದೇಶ ಪ್ರವೇಶಿಸುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಆಂಧ್ರದ 11 ಜಿಲ್ಲೆಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಪ್ರದೇಶದಲ್ಲಿಯೂ ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ 24ಗಂಟೆಯೊಳಗೆ ದಕ್ಷಿಣ ಮತ್ತು ಉತ್ತರ ಒಳನಾಡು ಪ್ರದೇಶದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಈ ತಿಂಗಳ ಕೊನೆಯಲ್ಲಿ ರಾಜ್ಯ ಪ್ರವೇಶಿಸಬೇಕಿದ್ದ ಮುಂಗಾರು ಮಳೆ ಅವಧಿಗೂ ಮುನ್ನವೇ ಆಗಮಿಸಿದೆ. ಇದರಿಂದ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಿದ್ದಾರೆ.
ಏತನ್ಮಧ್ಯೆ ರಾಜ್ಯದ ಹಲವಡೆ ಗುಡುಗು, ಸಿಡಿಲು, ಗಾಳಿ ಮಳೆಗೆ ಸಾಕಷ್ಟು ಸಾವು-ನೋವು ಸಂಭವಿಸಿದೆ. ಆ ನಿಟ್ಟಿನಲ್ಲಿ ಕಳೆದ ವರ್ಷದಂತೆಯೇ ಈ ಬಾರಿಯೂ ವರುಣನ ಆರ್ಭಟ ಗಂಭೀರ ಸ್ವರೂಪದ್ದಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.