ರಾಜಕೀಯ ದ್ವೇಷ, ಪಕ್ಷದೊಳಗಿನ ಅಸಮಾಧಾನ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಹೊರಬಿದ್ದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತಾನು ಸೋಲಲು ಕಾಂಗ್ರೆಸ್ ಪಕ್ಷದ ಚಿಕ್ಕಬಳ್ಳಾಪುರ ಅಭ್ಯರ್ಥಿಯೇ ಕಾರಣ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಹೆಸರನ್ನು ಉಚ್ಚರಿಸದೆ ಮಾಜಿ ಸಚಿವ ಜನಾರ್ದನ ಪೂಜಾರಿ ಗಂಭೀರವಾಗಿ ಆರೋಪಿಸಿದ್ದಾರೆ.
ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ದಕ್ಷಿಣ ಕನ್ನಡ ಕ್ಷೇತ್ರದ ಚುನಾವಣೆ ಒಟ್ಟಿಗೆ ನಡೆದಿದ್ದರೆ ತಾನು ಖಂಡಿತಾ ಗೆಲ್ಲುತ್ತಿದ್ದೆ ಎಂದು ಪೂಜಾರಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಎರಡು ಕ್ಷೇತ್ರಗಳ ಚುನಾವಣೆಗೆ ಒಂದು ವಾರಗಳ ಕಾಲದ ಅಂತರ ಇದ್ದಿದ್ದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ನನ್ನ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದ ಪೂಜಾರಿ, ತಾನು ಆ ಬಗ್ಗೆ ಮಾಧ್ಯಮಗಳ ಮುಂದೆ ವಿವರ ನೀಡಲಾರೆ ಎಂದರು. ಆದರೆ ಸಮಯ ಬಂದಾಗ ಎಲ್ಲವನ್ನೂ ಬಹಿರಂಗಗೊಳಿಸುವೆ ಎಂದು ಹೇಳಿದರು.
ತಾನು ಸತತವಾಗಿ ಸೋಲಲು ಯಾರು ಕಾರಣ, ಇದರ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ನನ್ನಲ್ಲಿ ಎಲ್ಲ ದಾಖಲೆಯೂ ಇದೆ ಎಂದು ಮೊಯ್ಲಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗಿದೆ ಎಂಬ ಆರೋಪ ಕೂಡ ಸತ್ಯಕ್ಕೆ ದೂರವಾದದ್ದು ಎಂದು ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಿದರು.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ಮತ್ತು ಜನಾರ್ದನ ಪೂಜಾರಿ ನಡುವಿನ ಸಂಬಂಧ ಹಾವು ಮುಂಗುಸಿ ತರಹ ಎಂಬ ವಿಷಯ ಜಗಜ್ಜಾಹೀರಾದದ್ದು. ಅಲ್ಲದೇ ತನ್ನ ಸೋಲಿಗೆ ಮೊಯ್ಲಿಯೇ ಕಾರಣ ಎಂದು ಪೂಜಾರಿ, ತನ್ನ ಸೋಲಿಗೆ ಪೂಜಾರಿ ಕಾರಣ ಎಂದು ಮೊಯ್ಲಿ ಈ ಹಿಂದಿನಿಂದಲೂ ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ಇದೀಗ ಕಳೆದ ಲೋಕಸಭಾ ಚುನಾವಣೆಯಲ್ಲೂ ಮೊಯ್ಲಿ ಮತ್ತು ಬಣ ತನ್ನ ವಿರುದ್ಧ ಕೆಲಸ ಮಾಡಿತ್ತು ಎಂದು ಬಹಿರಂಗವಾಗಿ ಹೇಳುವ ಮೂಲಕ ಪಕ್ಷದೊಳಗೆ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ