ರಾಜ್ಯಕ್ಕೆ ಧಾವಿಸುವ ಕೈಗಾರಿಕೋದ್ಯಮಿಗಳು ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರಿಗೆ 'ಬಂಡವಾಳ' ಹೂಡಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ, ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಿತ್ತಲ್ ಕಬ್ಬಿಣದ ಕಂಪನಿ ಬಂದು 30 ಸಾವಿರ ಕೋಟಿ ಬಂಡವಾಳ ಹೂಡಿದ್ದಾಯಿತು. ರಾಜ್ಯಕ್ಕೆ ಮತ್ಯಾರನ್ನು ಕರೆಸುತ್ತಾರೋ ನೋಡೋಣ ಎಂದರು. ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು ಎರಡು ವರ್ಷ ಹೆಚ್ಚಿಸಿ ನಿರುದ್ಯೋಗಿಗಳು ಪರದಾಡುವಂತಾಗಿದೆ. ಇದ್ಯಾವುದರ ಪರಿವೇ ಇಲ್ಲದಂತೆ ಮುಖ್ಯಮಂತ್ರಿ ಮತ್ತು ಸಚಿವರು ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 50 ವರ್ಷದ ರಾಜ್ಯ ಇತಿಹಾಸದಲ್ಲಿ ಇಂತಹ ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ನೋಡಿರಲಿಲ್ಲ. ಛಾಪಾ ಕಾಗದ ಪಡೆಯಲು ಜನ ಪರದಾಡುತ್ತಿದ್ದಾರೆ. ಅಕ್ಷರ ಜ್ಞಾನವಿಲ್ಲದವರು ಉದ್ದುದ್ದ ಅರ್ಜಿ ತುಂಬಬೇಕು ಎಂದರೆ ಹೇಗೆ ಸಾಧ್ಯ? ಜನಸಾಮಾನ್ಯರ ಕನಿಷ್ಠ ಕಷ್ಟಗಳ ಬಗ್ಗೆ ಸರಕಾರಕ್ಕೆ ಅರಿವಿಲ್ಲದಿದ್ದರೆ ಏನೆಲ್ಲ ಅನಾಹುತವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ದೂರಿದರು.
ರಾಜ್ಯ ಕಂಡ ಅತಿ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಆಗಿದ್ದು, ಅವರ ಮಂತ್ರಿಮಂಡಳ ಅದಕ್ಕೆ ಸಾಥ್ ನೀಡುತ್ತಿರುವುದು ವಿಷಾದನೀಯ. ಕಳಂಕಿತ ಸಚಿವರು, ಶಾಸಕರ ದಂಡಿನೊಂದಿಗೆ ಯಡಿಯೂರಪ್ಪ ಸದ್ಯವೇ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.