ಕನ್ನಡ ನಾಡಿಗೆ ಮೂರುಸಾವಿರ ಮಠ ಹಾಗೂ ಡಾ.ಮೂಜಗಂ ನೀಡಿದ ಕೊಡುಗೆ ಅಪಾರ ಎಂದು ಗ್ರಾಮೀಣಾಭಿವೃದ್ದಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಲವು ಶಾಲಾ ಕಾಲೇಜುಗಳನ್ನು ಆರಂಭಿಸಿ ಯಶಸ್ವಿಯಾಗಿ ನಡೆಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಪ್ರಗತಿಗೆ ಶ್ರೀಮಠ ಮಹತ್ವದ ಕೊಡುಗೆ ನೀಡಿದೆ. ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಮೂಜಗಂ ಶ್ರೀಗಳು ಹುಬ್ಬಳ್ಳಿಯಲ್ಲಿ ಮಹಿಳಾ ಕಾಲೇಜು ಆರಂಭಿಸಿದರು.
ಮಹಿಳಾ ವಿಶ್ವವಿದ್ಯಾಲಯ ಆರಂಭವಾಗಬೇಕೆಂದು ಶ್ರೀಗಳ ಅಭಿಲಾಷೆಯಾಗಿತ್ತು. ಸದ್ಯ ಅವರ ಕನಸು ನನಸಾಗಿದ್ದು, ಕೆಲ ವರ್ಷಗಳ ಹಿಂದೆ ವಿಜಾಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಗೊಂಡಿದೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಪುರುಷರು ಹಾಗೂ ಸ್ತ್ರೀಯರಲ್ಲಿ ಸಮಾನತೆ ತರಬೇಕೆಂದು ಸಾರಿದರು. ಅವರ ಸಂದೇಶವನ್ನು ಜಾರಿಗೆ ತಂದ ಕೀರ್ತಿ ಮೂಜಗಂ ಅವರಿಗೆ ಸಲ್ಲುತ್ತದೆ. ಮೂಜಗಂ ಜಾತ್ಯತೀತ ಮನೋಭಾವ ಹೊಂದಿದ್ದರು. ಆದ್ದರಿಂದ ಜಾತಿ ಧರ್ಮ ಭೇದವಿಲ್ಲದೇ ಎಲ್ಲರೂ ಮಠಕ್ಕೆ ಬರುವ ಪರಂಪರೆ ನಡೆದುಕೊಂಡು ಬಂದಿದೆ. ಹುಬ್ಬಳ್ಳಿ ಹಾಗೂ ಸುತ್ತಮುತ್ತಲೂ ಗಲಭೆಗಳಾದ ಸಂದರ್ಭದಲ್ಲಿ ಸ್ವಾಮಿಗಳು ಕೂಡಲೇ ಸ್ಪಂದಿಸಿ ಶಾಂತಿ ಕಾಪಾಡಲು ಯತ್ನಿಸುತ್ತಿದ್ದರು ಎಂದು ಶ್ಲಾಘಿಸಿದರು.