ಜನರು ಒದ್ದರೆ ನಾವು ಒದೆಸಿಕೊಳ್ತೇವೆ: ಶ್ರೀರಾಮುಲು ತಿರುಗೇಟು
ರಾಯಚೂರು, ಶುಕ್ರವಾರ, 28 ಮೇ 2010( 11:09 IST )
'ಜನರು ಒದ್ದರೆ ಒದೆಸಿಕೊಳ್ಳಲು ಸಿದ್ದರಿದ್ದೇವೆ' ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಗುರುವಾರ ರಾಯಚೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆಯ ನೆರೆ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಒಂದು ವೇಳೆ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಿಂದ ಅಸಮಾಧಾನವಾಗಿದ್ದರೆ ಜನರು ನೀಡುವ ಶಿಕ್ಷೆಯನ್ನು ಅನುಭವಿಸಲು ಸಿದ್ದ ಎಂದರು. ಅಲ್ಲದೇ ಕುಮಾರಸ್ವಾಮಿಯಾಗಲಿ ಅಥವಾ ಜನರಿಂದಾಗಿಲಿ ಒದೆಸಿಕೊಳ್ಳಲು ತಾವು ಸಿದ್ದರಿರುವುದಾಗಿಯೂ ಚುಚ್ಚಿದರು.
ಆಡಳಿತರೂಢ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಪ್ರತಿಪಕ್ಷಗಳ ಮುಖಂಡರು ವಿನಾ ಕಾರಣ ಆರೋಪ ಮಾಡುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ. ಅವರು ಈ ರೀತಿಯಾಗಿ ಬಾಯಿಗೆ ಬಂದಂತೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಆ ನಿಟ್ಟಿನಲ್ಲಿ ನೆರೆ ಸಂತ್ರಸ್ತರು ಇನ್ನು ಮುಂದೆ ಮೃದು ಧೋರಣೆ ತಾಳದೆ ಮುಖ್ಯಮಂತ್ರಿ ಹಾಗೂ ಜನಪ್ರತಿನಿಧಿಗಳಿಗೆ ಒದೆಯಬೇಕು ಎಂದು ಇತ್ತೀಚೆಗಷ್ಟೇ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿದ್ದರು.