ಕೋಮುಗಲಭೆ ಸೃಷ್ಟಿಸಲು ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಶ್ರೀರಾಮಸೇನಾ ವರಿಷ್ಠ ಪ್ರಮೋದ್ ಮುತಾಲಿಕ್ ಮತ್ತು ಅವರ ಬೆಂಬಲಿಗ ವಸಂತ ಕುಮಾರ ಭವಾನಿ ವಿರುದ್ಧ ಕೊನೆಗೂ ಹಳೇ ಹುಬ್ಬಳ್ಳಿ ಪೊಲೀಸರು ಬುಧವಾರ ರಾತ್ರಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಹೆಡ್‌ಲೈನ್ಸ್ ಟುಡೇ ಮತ್ತು ತೆಹಲ್ಕಾ ವಾರಪತ್ರಿಕೆ ಜಂಟಿಯಾಗಿ ನಡೆಸಿದ ಸ್ಟಿಂಗ್ ಆಪರೇಶನ್‌ನಲ್ಲಿ ಮುತಾಲಿಕ್ ಗಲಭೆ ಸೃಷ್ಟಿಸಲು ಹಣ ಪಡೆದಿದ್ದಾರೆಂಬ ವರದಿ ಪ್ರಸಾರವಾಗಿತ್ತು. ನಂತರ ಮುತಾಲಿಕ್ ನಿಜಬಣ್ಣ ಬಯಲಾಗಿದ್ದು, ಕೂಡಲೇ ಅವರನ್ನು ಬಂಧಿಸಿ ಶ್ರೀರಾಮಸೇನೆಯನ್ನು ನಿಷೇಧಿಸಬೇಕೆಂದು ರಾಜ್ಯದ ಪ್ರಗತಿಪರ ಸಂಘಟನೆಗಳು ಒತ್ತಡ ಹೇರಿದ್ದವು.
ಈ ರಹಸ್ಯ ಕಾರ್ಯಾಚರಣೆ ಹುಬ್ಬಳ್ಳಿಯಲ್ಲಿಯೇ ನಡೆದಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಮುತಾಲಿಕ್ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತಾನು ಗಲಭೆ ಸೃಷ್ಟಿಸಲು ಯಾವುದೇ ಲಂಚ ಪಡೆದಿಲ್ಲ, ಇದೆಲ್ಲಾ ಮಾಧ್ಯಮಗಳ ಕಪೋಲಕಲ್ಪಿತ ವರದಿ. ತಾನು ತಪ್ಪಿತಸ್ಥನಾಗಿದ್ದರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದ ಎಂದು ಮುತಾಲಿಕ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದ್ದರು. ಅಲ್ಲದೇ ವರದಿ ಬಿತ್ತರಿಸಿದ ಮಾಧ್ಯಮಗಳ ವಿರುದ್ಧ ಸುಮಾರು 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿಸಿದ್ದರು.
ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು, ಮುತಾಲಿಕ್ ವಿರುದ್ಧ ದೂರು ದಾಖಲು, ಗಲಭೆ ಸೃಷ್ಟಿಸಲು ವ್ಯವಸ್ಥಿತ ಸಂಚು ಆರೋಪ. ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲು.