ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಡಿಎನ್ಎ ಪರೀಕ್ಷೆಗೆ ರಕ್ತ, ಧ್ವನಿ ಮಾದರಿ ಸಂಗ್ರಹಿಸಲು ಹೈಕೋರ್ಟ್ ಸಿಐಡಿಗೆ ಅನುಮತಿ ನೀಡಿದೆ.
ತಮ್ಮನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ರಕ್ತ ಮತ್ತು ಧ್ವನಿ ಮಾದರಿ ಸಂಗ್ರಹಿಸುವ ಸಿಐಡಿ ನಿರ್ಧಾರವನ್ನು ಪ್ರಶ್ನಿಸಿ ಹಾಲಪ್ಪ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರಿದ್ದ ಏಕಸದಸ್ಯ ಪೀಠ ಡಿಎನ್ಎ ಪರೀಕ್ಷೆ ನಡೆಸಲು ಸಿಐಡಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಏತನ್ಮಧ್ಯೆ ಡಿಎನ್ಎ ಪರೀಕ್ಷೆಗೆ ಸಂಗ್ರಹಿಸುವ ರಕ್ತದ ಮಾದರಿ ಮತ್ತು ಧ್ವನಿಯನ್ನು ದುರುಪಯೋಗಪಡಿಸಿಕೊಳ್ಳಬಾರದು. ತನಿಖೆಗೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ನ್ಯಾಯಪೀಠ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಡಿಎನ್ಎ ಪರೀಕ್ಷೆಗೆ ಒಳಪಡಿಸುವ ಸಿಐಡಿ ಕ್ರಮವನ್ನು ಪ್ರಶ್ನಿಸಿ ಹಾಲಪ್ಪ ಪರ ವಕೀಲರಾದ ಅಶೋಕ್ ಭಟ್ ಅವರು ಶಿವಮೊಗ್ಗದ 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಮೇ 21ರಂದು ಈ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ಡಿಎನ್ಎ ಪರೀಕ್ಷೆಗೆ ಅಸ್ತು ಎಂದಿತ್ತು. ಇದನ್ನು ಪ್ರಶ್ನಿಸಿ ಹಾಲಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.