ದೇಶದಲ್ಲಿ ಮಾವೋವಾದಿ ಗುಂಪಿನ ನಕ್ಸಲೀಯರಿಂದ ನಡೆಯುತ್ತಿರುವ ನರಮೇಧ ತಡೆಯುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಕ್ಸಲೀಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಚಿದಂಬರಂ ವಿಫಲರಾಗಿರುವುದಾಗಿ ವಾಗ್ದಾಳಿ ನಡೆಸಿದರು. ಕೇಂದ್ರದ ಗೃಹ ಸಚಿವರಾಗಿರುವ ಚಿದಂಬರಂ ಅವರ ಬಳಿಯೇ ಪೂರ್ಣ ಪ್ರಮಾಣದ ಅಧಿಕಾರವಿರುತ್ತದೆ. ಆ ನಿಟ್ಟಿನಲ್ಲಿ ನಕ್ಸಲೀಯರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಅವರು ಇನ್ಯಾವುದೇ ಸಚಿವರತ್ತ ನೋಡುವ ಅಗತ್ಯವಿಲ್ಲ ಎಂದರು.
ನಕ್ಸಲೀಯರು ದೇಶಾದ್ಯಂತ ಮುಗ್ದ ಜನರು ಮತ್ತು ಮಿಲಿಟರಿ ಸಿಬ್ಬಂದಿಗಳ ಮಾರಣಹೋಮ ನಡೆಸುತ್ತಿದ್ದಾರೆ. ಆದರೆ ಅವರನ್ನು ಮಟ್ಟಹಾಕುವಲ್ಲಿ ಚಿದಂಬರಂ ವಿಫಲರಾಗಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಗುರುತರ ಜವಾಬ್ದಾರಿ ಆಯಾ ರಾಜ್ಯಗಳಿಗೂ ಸೇರಿದ್ದಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ನಕ್ಸಲ್‌ನಂತಹ ಗಂಭೀರ ಸಮಸ್ಯೆಯನ್ನು ಮಟ್ಟಹಾಕುವಲ್ಲಿ ಕೇಂದ್ರ ಸರ್ಕಾರ ಕೂಡ ಪ್ರಮುಖ ಮುತುವರ್ಜಿ ವಹಿಸಬೇಕಾಗುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ ಎಂದಾದರೆ ಚಿದಂಬರಂ ಆ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ ಎಂದು ಹರಿಹಾಯ್ದರು.
ಪಶ್ಚಿಮಬಂಗಾಳದ ಮಿಡ್ನಾಪುರದಲ್ಲಿ ಹೌರಾ-ಕುರ್ಲಾ ಸೂಪರ್ ಡಿಲಕ್ಸ್ ಎಕ್ಸ್‌ಪ್ರೆಸ್ ರೈಲಿನ ಹಳಿಸ್ಫೋಟಿಸಿ 65 ಮುಗ್ದ ಪ್ರಯಾಣಿಕರ ಸಾವಿಗೆ ಕಾರಣವಾದ ನಕ್ಸಲೀಯರ ದುಷ್ಕೃತ್ಯವನ್ನು ಉಲ್ಲೇಖಿಸಿ ಮಾತನಾಡಿದ ಪೂಜಾರಿ, ನಕ್ಸಲೀಯರ ಈ ಹೀನಕೃತ್ಯ ಖಂಡನೀಯ ಎಂದರು. ಮುಗ್ದ ಜನರ ಮಾರಣಹೋಮ ನಡೆಸುತ್ತಿರುವ ನಕ್ಸಲೀಯರ ವಿರುದ್ಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.