ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ: ರವೀಂದ್ರನಾಥ್ (BJP | Ravindranath | Yeddyurappa | Karnataka | Congress)
ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ: ರವೀಂದ್ರನಾಥ್
ಅರಸೀಕೆರೆ, ಶುಕ್ರವಾರ, 28 ಮೇ 2010( 20:52 IST )
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರ ಅವಶ್ಯಕತೆಗೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಪೂರೈಕೆ ಮಾಡಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಎಸ್.ಎ.ರವೀಂದ್ರನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಡನೆ ಮಾತನಾಡಿದ ಅವರು, ರಾಜ್ಯದಲ್ಲಿ 7.50 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದರೂ, ಸರಕಾರ 10 ಲಕ್ಷ ಟನ್ ಬೇಡಿಕೆ ಪೂರೈಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ ಎಂದು ಸ್ಪಷ್ಟಪಡಿಸಿದರು.
ಸೋಯಾಬಿನ್, ನೆಲಗಡಲೆ, ಮೆಕ್ಕೆಜೋಳ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ಹೆಸರು, ಉದ್ದು, ಅವರೆ ಮತ್ತು ತೊಗರಿ ಬಿತ್ತನೆ ಬೀಜವನ್ನು ರೈತರಿಗೆ ಶೇ. 50 ರಿಯಾಯಿತಿ ದರದಲ್ಲಿ ವಿತರಿಸಲು ಸರಕಾರ ಕ್ರಮ ತೆಗೆದುಕೊಂಡಿದೆ ಎಂದರು.
ರಾಜ್ಯದಲ್ಲಿ 19 ಲಕ್ಷ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಈಗಾಗಲೇ 4.50 ಲಕ್ಷ ಟನ್ ರಸಗೊಬ್ಬರ ಪೂರೈಕೆ ಆಗಿದೆ. ಮೇ ಅಂತ್ಯಕ್ಕೆ ಇನ್ನೂ 3 ಲಕ್ಷ ಟನ್ ರಸಗೊಬ್ಬರ ಕೇಂದ್ರದಿಂದ ಪೂರೈಕೆ ಆಗಲಿದೆ ಎಂದು ಹೇಳಿದರು.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬೇಡಿಕೆಯಿರುವ ರಸಗೊಬ್ಬರವನ್ನು ಸಕಾಲದಲ್ಲಿ ರೈತರಿಗೆ ದೊರಕುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ಗೊಬ್ಬರದ ಅಂಗಡಿಗಳು ಮತ್ತು ಸಹಕಾರ ಸಂಘಗಳ ಮೂಲಕ 1.50 ಲಕ್ಷ ಟನ್ ರಸಗೊಬ್ಬರವನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ಬೋರನಕೊಪ್ಪಲು ಗ್ರಾಮದ ತೆಂಗು ಸಂಶೋಧನಾ ಕೇಂದ್ರಕ್ಕೆ ಕಾಯಕಲ್ಪ ಕಲ್ಪಿಸುವ ಸಂಬಂಧ ತೋಟಗಾರಿಕೆ ಸಚಿವರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.