ರಾಜ್ಯಸಭೆ ಮತ್ತು ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಕುರಿತಂತೆ, ಬೆಂಗಳೂರಿನಲ್ಲಿ ಶನಿವಾರ ನಡೆಯುವ ಶಾಸಕರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಲು ಎಚ್.ಡಿ.ಕುಮಾರಸ್ವಾಮಿ ಹೊಸದಿಲ್ಲಿಗೆ ತೆರಳಿ ಮಾತುಕತೆ ನಡೆಸಿದ್ದು,ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. ಹಿಂದಿನ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜೆಡಿಎಸ್ ಬೆಂಬಲಿಸಿತ್ತು. ಈ ಬಾರಿ ನಮ್ಮನ್ನು ಬೆಂಬಲಿಸಿ ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಚುನಾವಣಾ ಪೂರ್ವ ಮೈತ್ರಿ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ಸಂಪರ್ಕಿಸಿಲ್ಲ. ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ. ಮುಂದಿನ ಬೆಳವಣಿಗೆ ಏನಾಗಿದೆ ಎಂಬ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ಸರಕಾರದ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಕೇಳಿದ್ದಕ್ಕೆ, ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಯಾರು ಬೇಕಾದರೂ ಬಂದು ಹೋಗಲಿ, ಆ ಬಗ್ಗೆ ಚರ್ಚೆ ಅಪ್ರಸ್ತುತ. ವೇಗದಲ್ಲಿ ಯೋಜನೆ ಅನುಷ್ಠಾನಗೊಂಡು ರಾಜ್ಯ ಅಭಿವೃದ್ದಿ ಕಂಡರೆ ಸಂತೋಷ ಪಡೋಣ ಬಿಡಿ ಎಂದು ವ್ಯಂಗ್ಯ ಪ್ರತಿಕ್ರಿಯೆ ನೀಡಿದರು.
ನೆರೆ ಸಂತ್ರಸ್ತರ ಪರಿಹಾರ ನಿಗೆ ಕೇವಲ 2,500 ಕೋಟಿ ರೂ. ಬಂದಿದೆ ಎಂಬ ಸಂಗತಿ ಮಾಹಿತಿ ಹಕ್ಕು ಕಾಯಿದೆಯಿಂದ ಗೊತ್ತಾಗಿದೆ. ಮನೆ ನಿರ್ಮಾಣಕ್ಕೆ ಮಠದಿಂದ 10 ಕೋಟಿ ರೂ. ಕೊಟ್ಟಿದ್ದೇವೆ. ಆದರೆ ಇದುವರೆಗೂ ಎಷ್ಟು ಮನೆ ನಿರ್ಮಾಣವಾಗಿದೆ ಎಂಬ ಲೆಕ್ಕ ನೀಡಿಲ್ಲ. ಉಳಿದ 40 ಕೋಟಿ ನೀಡುವಂತೆ ಸರಕಾರ ಕೋರಿದೆ ಎಂದು ಸ್ವಾಮೀಜಿ (ಬಾಲಗಂಗಾಧರನಾಥ ಸ್ವಾಮೀಜಿ) ಒಬ್ಬರು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಈ ಅಕ್ರಮವನ್ನು ಗಮನಿಸಿದರೆ ಈ ಸರಕಾರ ಯಾವುದಕ್ಕೂ ಹಿಂಜರಿಯುವುದಿಲ್ಲ, ಜಗ್ಗುವುದಿಲ್ಲ ಎಂಬುದು ಅರ್ಥವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.