ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 2 ವರ್ಷ ಪೂರೈಸಿದ ಬಿಜೆಪಿ ಸರ್ಕಾರ: ಪ್ರೋಗ್ರೆಸ್ ರಿಪೋರ್ಟ್! (BJP | Yeddyurappa | Karnataka | Bangalore | Congress | JDS)
Bookmark and Share Feedback Print
 
PTI
ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಭಾನುವಾರ ಎರಡು ವರ್ಷಗಳನ್ನು ಪೂರೈಸಲಿದ್ದು. ಪ್ರತಿಪಕ್ಷ ಹಾಗೂ ಸ್ವತಃ ಆಡಳಿತಾರೂಢ ಪಕ್ಷದ ತೀವ್ರ ಬಂಡಾಯ, ಬೆದರಿಕೆಯ ನಡುವೆಯೂ ಬಿಜೆಪಿ ಸರ್ಕಾರ ಯಶಸ್ವಿಯಾಗಿ ಮುಂದುವರಿದಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ರಾಜ್ಯದಲ್ಲಿ ಎಲ್ಲ ಬಿಕ್ಕಟ್ಟುಗಳನ್ನು ಪರಿಹರಿಸಿಕೊಂಡು ಸರ್ಕಾರವನ್ನು ಮುನ್ನಡೆಸಿದ ಕೀರ್ತಿಗೆ ಭಾಜನರಾದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಪ್ರತಿಪಕ್ಷವಾದ ಕಾಂಗ್ರೆಸ್-ಜೆಡಿಎಸ್ ವಾಗ್ದಾಳಿ, ಪ್ರತಿಭಟನೆ ಒಂದೆಡೆಯಾದರೆ, ಮತ್ತೊಂದೆಡೆ ಪಕ್ಷದ ಶಾಸಕರು, ಸಚಿವರೇ ಮುಖ್ಯಮಂತ್ರಿಗಳನ್ನು ಒತ್ತಡಕ್ಕೆ ಸಿಲುಕಿಸಿ ಸರ್ಕಾರವನ್ನು ಉರುಳಿಸಲು ಯತ್ನಿಸಿದ್ದರು. ಅವೆಲ್ಲದರ ಫಲಿತಾಂಶ ಎಂಬಂತೆ ಸಚಿವ ಸಂಪುಟದಲ್ಲಿದ್ದ ಏಕೈಕ ಮಹಿಳಾ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆಯ ತಲೆದಂಡ, ರೆಡ್ಡಿ ಬ್ರದರ್ಸ್‌ಗೆ ಮಣೆ ಹಾಕಿ ಕುರ್ಚಿ ಉಳಿಸಿಕೊಂಡಿದ್ದಾರೆಂಬ ಆರೋಪ ಪ್ರತಿಪಕ್ಷಗಳದ್ದು.

2008 ಮೇ 30ರಂದು ಪ್ರಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ ರಾಜ್ಯದ ಅಧಿಕಾರದ ಗದ್ದುಗೆ ಏರಿತ್ತು. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗೆ ಅಧಿಕಾರದ ಚುಕ್ಕಾಣಿ ಹಿಡಿದ ಹತ್ತು ದಿನಗಳಲ್ಲಿಯೇ ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು, ಅದರಲ್ಲಿ ಸಾವನ್ನಪ್ಪಿದವರು ಇಬ್ಬರು ರೈತರು ಎಂದು ಹೇಳಲಾಗಿತ್ತು. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ, ರೈತರ ಮೇಲೆ ಗೋಲಿಬಾರ್ ನಡೆಸಿದ ಬಗ್ಗೆಯೂ ಬಿಜೆಪಿ ಸರ್ಕಾರ ಸಾಕಷ್ಟು ವಿವಾದಕ್ಕೆ ಈಡಾಗಿತ್ತು.

ಅಲ್ಲದೇ ಉಪಚುನಾವಣೆ, ಬಿಬಿಎಂಪಿ, ಲೋಕಸಭೆ, ಗ್ರಾಮ ಪಂಚಾಯ್ತಿತಿ ಚುನಾವಣೆಯಲ್ಲಿ ಹಣ,ಹೆಂಡ ಹಂಚಿ ಗೆಲುವು ಸಾಧಿಸಿದ್ದು, ಆಪರೇಶನ್ ಕಮಲದ ಮೂಲಕ ಕುತಂತ್ರ ರಾಜಕೀಯ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಮುಖ್ಯಮಂತ್ರಿಗಳು ವಿಫಲ, ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಹಿಂದೇಟು, ರೆಡ್ಡಿ ಬ್ರದರ್ಸ್‌ಗೆ ಶರಣು ಹೊಡೆದಿರುವುದೇ ಬಿಜೆಪಿ ಸರ್ಕಾರದ ಸಾಧನೆ ಎಂಬ ಆರೋಪ ಪ್ರತಿಪಕ್ಷಗಳದ್ದು.

ಸಚಿವರು ತಂದ ಕಳಂಕ: ಆಪರೇಶನ್ ಕಮಲ, ಚುನಾವಣೆ, ರೆಡ್ಡಿ ಬ್ರದರ್ಸ್ ಹೈಜಾಕ್ ಡ್ರಾಮಾ ಎಲ್ಲವನ್ನೂ ನಿಭಾಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಕೊನೆಗೂ ಕಳಂಕಿತ ಸಚಿವರು, ಶಾಸಕರಿಂದ ತೀವ್ರ ಮುಜುಗರಕ್ಕೀಡಾಗಿರುವುದನ್ನು ಸ್ವತಃ ಪಕ್ಷದ ಸಚಿವ ಸುರೇಶ್ ಕುಮಾರ್ ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಬಕಾರಿ ಸಚಿವ ರೇಣುಕಾಚಾರ್ಯ-ನರ್ಸ್ ಜಯಲಕ್ಷ್ಮಿ ಪ್ರಕರಣ, ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪ್ರಕರಣ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ಡಿ.ಸುಧಾಕರ್, ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಹರತಾಳು ಹಾಲಪ್ಪ, ಸಂಪಂಗಿ ಲಂಚ ಪುರಾಣ ಪ್ರಮುಖವಾದವುಗಳು!

ಬೃಹತ್ ಸಮಾವೇಶ: ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜೂನ್ 18-19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಾಧನಾ ಸಮಾವೇಶ ನಡೆಸಲು ಬಿಜೆಪಿ ಸಿದ್ದತೆ ನಡೆಸಿದೆ.

ಸರ್ಕಾರದ ಪ್ರೋಗ್ರೆಸ್ ರಿಪೋರ್ಟ್: ಅಧಿಕಾರದ ಗದ್ದುಗೆ ಏರಿ ಎರಡು ವರ್ಷವಾದ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ವಿವರ ಬಿಡುಗಡೆ ಮಾಡಿದೆ. 2250 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆ, ಮೂರುವರೆ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ, ಸಣ್ಣ-ಅತಿ ಸಣ್ಣ ರೈತರಿಗೆ 1000 ರೂ.ಪ್ರೋತ್ಸಾಹ ಧನ, ಬಡ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಸೈಕಲ್ ಯೋಜನೆ ಜಾರಿಗೆ ತರಲಾಗಿದೆ.

ಅದೇ ರೀತಿ ಶೇ.3ರ ಬಡ್ಡಿ ದರದಲ್ಲಿ ರೈತರಿಗೆ 7ಸಾವಿರ ಕೋಟಿ ರೂ. ಸಾಲ ಕೊಡಲಾಗಿದೆ. ಗುಲ್ಬರ್ಗಾ ವಲಯದಲ್ಲಿ ವಾಜಪೇಯಿ ಆರೋಗ್ಯ ವಿಮಾ ಯೋಜನೆ ಜಾರಿ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗಾಗಿ 65ಸಾವಿರ ಮನೆಗಳನ್ನು ಕಟ್ಟಿಕೊಡುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 13ಸಾವಿರ ಮನೆಗಳ ಕಾರ್ಯ ಪೂರ್ಣಗೊಂಡಿದೆ. ಸುಮಾರು ಒಂದೂವರೆ ಲಕ್ಷ ಜನಕ್ಕೆ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಉದ್ಯೋಗ ಒದಗಿಸಿಕೊಡಲಾಗಿದೆ. ಕೌಶಲ್ಯ ಅಭಿವೃದ್ಧಿ ಯೋಜನೆಯಡಿ 2ಲಕ್ಷ ಜನರಿಗೆ ತರಬೇತಿ ಕೊಡಲಾಗಿದೆ. ಇದೀಗ ಬಂಡವಾಳ ಹೂಡಿಕೆ ಸಮಾವೇಶ ಹಮ್ಮಿಕೊಳ್ಳುತ್ತಿದ್ದು ಇದರಿಂದ ರಾಜ್ಯದಲ್ಲಿ 4ರಿಂದ 5 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಅಭಿವೃದ್ಧಿ ಕುರಿತ ರಿಪೋರ್ಟ್‌ನಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ