ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚಳ್ಳಕೆರೆಯಲ್ಲಿ ಭೀಕರ ಬಸ್ ದುರಂತ, 30 ಮಂದಿ ಸಜೀವ ದಹನ (Chitradurga | Bus Accident | Karnataka | Govt Bus)
Bookmark and Share Feedback Print
 
ಚಾಲಕನ ಅಜಾಗರೂಕತೆಯ ಪರಿಣಾಮ ಇಲ್ಲಿನ ಚಳ್ಳಕೆರೆ ಬಳಿ ಸಂಭವಿಸಿದ ಭಾರೀ ಬಸ್ ಅಪಘಾತ 30 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಆದರೆ, ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಲಕ ನಿದ್ರೆಗೆ ಜಾರಿದ ಪರಿಣಾಮ ಬೆಳಗ್ಗಿನ ಜಾವ ಚಳ್ಳಕೆರೆಯ ನಾಯಕನಹಟ್ಟಿ ಕ್ರಾಸ್ ಬಳಿಯ ಕಿರು ಸೇತುವೆಗೆ ಸರ್ಕಾರಿ ಬಸ್ (ಕೆಎ 33 ಎಫ್ 70) ಢಿಕ್ಕಿ ಹೊಡೆದು ಪಕ್ಕದ ಪುಟ್ಟ ಮೂರ್ನಾಲ್ಕು ಅಡಿ ಆಳದ ಹಳ್ಳಕ್ಕೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ. ಬಸ್ ಉರುಳಿ ಬಿದ್ದ ಪರಿಣಾಮ ದಿಢೀರ್ ಬಸ್‌ನ ಇಂಧನ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡು 30 ಮಂದಿ ಸಜೀವ ದಹನಗೊಂಡರೆ 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಇಲ್ಲಿಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮೃತ ದುರ್ದೈವಿಗಳ ಪೈಕಿ 15 ಮಂದಿ ಮಹಿಳೆಯರಾಗಿದ್ದು, 10 ಮಂದಿ ಮಕ್ಕಳು ಹಾಗೂ 5 ಮಂದಿ ಪುರುಷರು ಸೇರಿದ್ದಾರೆ. ಇವರಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು ಬೆಂಗಳೂರಿಗೆ ತುತ್ತು ಅನ್ನಕ್ಕಾಗಿ ಕೂಲಿ ಅರಸಿ ಸಾಗುವ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಸೇರಿದ್ದ ಕುಟುಂಬಗಳಾಗಿತ್ತು. ಹೀಗಾಗಿ ಮೃತರಲ್ಲಿ ಬಹುಪಾಲು ಒಂದಿ ಒಂದೇ ಗ್ರಾಮಕ್ಕೆ ಸೇರಿದವರು ಹಾಗೂ ಒಂದೇ ಕುಟುಂಬದ ಮಂದಿಯೇ ಅಧಿಕವಾಗಿದ್ದಾರೆ.

ಬಸ್‌ಗೆ ಹತ್ತಿಕೊಂಡ ಬೆಂಕಿ ಒಂದು ವಿದ್ಯುತ್ ಕಂಬದೆತ್ತರಕ್ಕೆ ಧಗಧಗನೆ ಹೊತ್ತಿಕೊಂಡು ಉರಿದಿದ್ದು, ಬಸ್‌ನ ಹಿಂಭಾಗ ಸಂಪೂರ್ಣ ಭಸ್ಮವಾಗಿ ಬಹುತೇಕ ಭಾಗ ಸುಟ್ಟು ಕರಕಲಾಗಿ ಹೋಗಿದೆ. ಹೀಗಾಗಿ ಒಳಗೇ ಸಿಕ್ಕಿಹಾಕಿಕೊಂಡು ಹೊರಬರಲಾಗದೆ ಬೆಂಕಿಗಾಹುತಿಯಾದ ಮಂದಿಯೂ ಬಹುತೇಕ ಸುಟ್ಟು ಕರಕಲಾಗಿದ್ದು, 21 ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಕೇವಲ 9 ಶವಗಳ ಗುರುತು ಪತ್ತೆ ಹಚ್ಚಲಾಗಿದೆ.

ಮೃತರ ಕುಟುಂಬಕ್ಕೆ ತಲಾ 2.5 ಲಕ್ಷ ರೂಪಾಯಿಗಳ ಪರಿಹಾರ ನೀಡುವುದಾಗಿ ಕೆಎಸ್ಆರ್‌ಟಿಸಿ ಘೋಷಿಸಿದ್ದು, ಮುಖ್ಯಮಂತ್ರಿಗಳು ತಮ್ಮ ಪರಿಹಾರ ನಿಧಿಯಿಂದ ತಲಾ ಒಂದು ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೆ 25 ಸಾವಿರ ರೂಪಾಯಿಗಳ ಪರಿಹಾರ ನೀಡಲಾಗುತ್ತಿದ್ದು, ಚಿಕಿತ್ಸಾ ವೆಚ್ಚವನ್ನೂ ಸಂಪೂರ್ಣ ಬರಿಸುವ ಭರವಸೆಯನ್ನು ಸರ್ಕಾರ ನೀಡಿದೆ.

ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಈ ದುರಂತದಿಂದ ತೀವ್ರ ನೋವಾಗಿದೆ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆ ಸಚಿವ ಕರುಣಾಕರ ರೆಡ್ಡಿ ಭೇಟಿ ನೀಡಿದ್ದು ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಸುರಪುರ ಶಾಸಕ ರಾಜು ಗೌಡ ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದು, ಸಾರಿಗೆ ಸಚಿವ ಆರ್. ಅಶೋಕ್ ಕೂಡಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ