ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೆರವಿದ್ದರೆ ರಾಜ್ಯಕ್ಕೆ ನಾನು ಎಷ್ಟು ಬೇಕಾದರೂ ಸೌಲಭ್ಯ ನೀಡಬಲ್ಲೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ನೀಡುವ ಅಗತ್ಯ ಇದೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಣಬ್‌ರನ್ನು ವೇದಿಕೆ ಮೇಲೆ ಮನವಿ ಮಾಡಿದ ಸನ್ನಿವೇಶ ಗುಲ್ಬರ್ಗದಲ್ಲಿ ನಡೆಯಿತು.
ಗುಲ್ಬರ್ಗದಲ್ಲಿ ನಡೆದ ಇಎಸ್ಐಸಿ ವೈದ್ಯಕೀಯ ಶಿಕ್ಷಣ ಸಂಕೀರ್ಣಣದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗ ಹಿಂದುಳಿದ ಪ್ರದೇಶವಾಗಿದೆ. ಅನ್ಯ ರಾಜ್ಯಗಳಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಅಂಥ ಪ್ಯಾಕೇಜನ್ನು ಇಲ್ಲಿಯೂ ನೀಡಬೇಕು ಎಂದು ಅವರು ಹಣಕಾಸು ಸಚಿವರಿಗೆ ಮನವಿ ಮಾಡಿದರು.
ಅಸಂಘಟಿತ ಕಾರ್ಮಿಕರ ಉದ್ದಾರಕ್ಕೆ ಐದು ಸಾವಿರ ಕೋಟಿ ರೂ. ಬೇಕು ಎಂದು ನಾನು ಮನವಿ ಮಾಡಿದ್ದೆ. ಸಧ್ಯಕ್ಕೆ ಅವರು ಒಂದು ಸಾವಿರ ಕೋಟಿ ರೂ.ವನ್ನು ಬಜೆಟ್ಟಿನಲ್ಲಿ ಒದಗಿಸಿದ್ದಾರೆ. ಬೀಡಿ ಕಾರ್ಮಿಕರಿಗೆ ಅಗತ್ಯವಾಗಿರುವ 400 ಕೋಟಿ ರೂ.ವನ್ನು ನೀಡುವಂತೆ ಕೋರಿದಾಗ ತಕ್ಷಣವೇ ಬಿಡುಗಡೆ ಮಾಡಿದ್ದಾರೆ. ಹೀಗೆ ಅನೇಕ ರೀತಿಯಲ್ಲಿ ಅವರು ನನ್ನ ಖಾತೆಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಹಲವು ಸಮಸ್ಯೆಗಳು ನನ್ನ ಬಳಿ ಇವೆ. ಅವುಗಳನ್ನು ತೆಗೆದುಕೊಂಡು ತಮ್ಮ ಬಳಿ ಬರುವೆ ಎಂದು ಅವರು ಇದೇ ಸಂದರ್ಭದಲ್ಲಿ ಖರ್ಗೆ ತಿಳಿಸಿದರು.