ಕೆಲವರಿಗೆ ನಮ್ಮ ಅಭಿವೃದ್ದಿ ಸಹಿಸಲು ಆಗುತ್ತಿಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು, ಭಾನುವಾರ, 30 ಮೇ 2010( 18:15 IST )
ಅಭಿವೃದ್ದಿ ಮೂಲಕ ಜನರ ಮನಸ್ಸು ಗೆಲ್ಲುವ ತಮ್ಮ ವಿಶ್ವಾಸದ ರಾಜಕಾರಣವನ್ನು ಕ್ಷೇತ್ರದ ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಡೆದಾಳುವ ನೀತಿ ಅನುಸರಿಸುತ್ತಿದ್ದವರಿಗೆ ತಮ್ಮ ವಿಶ್ವಾಸದ ರಾಜಕಾರಣ ನುಂಗಲಾರದ ತುತ್ತಾಗಿದೆ. ಬೀರೂರು ಕ್ಷೇತ್ರದಲ್ಲಿ 30 ವರ್ಷಗಳಿಂದ ಹೊಡೆದಾಟದ ರಾಜಕಾರಣವೇ ಇತ್ತು. ಆ ಕ್ಷೇತ್ರದ ಅನೇಕ ಪ್ರದೇಶಗಳು ತಮ್ಮ ಕ್ಷೇತ್ರ ವ್ಯಾಪ್ತಿಗೆ ಸೇರಿದ ಬಳಿಕ ಹೊಡೆದಾಟದ ರಾಜಕಾರಣ ಕೊನೆಗೊಂಡಿದೆ ಎಂದು ಜೆಡಿಎಸ್ ಮುಖಂಡರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೊಡೆದಾಡಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು ಮನೆ ಹಾಳು ಮಾಡಿಕೊಂಡಿರುವ ನಿದರ್ಶನಗಳಿವೆ. ತಾವು ಶಾಸಕರಾದ ಎರಡೇ ವರ್ಷಗಳಲ್ಲಿ ದ್ವೇಷದ ರಾಜಕಾರಣ ತಪ್ಪಿ ಒಳ್ಳೆಯ ವಾತಾವರಣ ಮೂಡಿದೆ ಎಂದರು.
ಶಾಸಕರ ಉಪಟಳ, ಭ್ರಷ್ಟಾಚಾರ ಹೆಚ್ಚಿದೆ ಎನ್ನುವವರು ನಿರ್ದಿಷ್ಟ ದೂರು ಸಲ್ಲಿಸಿದರೆ ಯಾವುದೇ ತನಿಖೆಗೆ ಪಕ್ಷದ ಹಾಗೂ ತಮ್ಮ ಸಹಕಾರ ಇದ್ದೇ ಇರುತ್ತದೆ. ಅನಗತ್ಯವಾಗಿ ತಪ್ಪು ಮಾಹಿತಿ ನೀಡುವ ಕೆಲಸ ಮಾಡಬಾರದು ಎಂದು ಜೆಡಿಎಸ್ ಮುಖಂಡರಿಗೆ ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಕೇವಲ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕು ಕ್ಷೇತ್ರದಿಂದ ರ್ಸ್ಪಸಿದ್ದವರಲ್ಲಿ ಉತ್ತಮರೆಂಬ ಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿಯನ್ನು ಬಿಜೆಪಿ ಬೆಂಬಲಿಸಿತ್ತು. ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಆಗಿತ್ತು. ತರೀಕೆರೆ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಈ ಹೊಂದಾಣಿಕೆ ನಡುವೆ ತಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದರೆ, ಕಡೂರು ತಾಲೂಕಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಒಂದು ಮತದ ಅಂತರದಿಂದ ಸೋತಿದ್ದಾರೆ. ಸ್ವ ಸಾಮರ್ಥ್ಯದಿಂದ ಬೆಳೆದಿರುವ ತಮ್ಮ ಪಕ್ಷಕ್ಕೆ ಪರಾವಲಂಬಿ ರಾಜಕಾರಣದಲ್ಲಿ ನಂಬಿಕೆ ಇಲ್ಲ ಎಂದರು.