ನಕ್ಸಲರ ಅಟ್ಟಹಾಸದ ಸಂದರ್ಭ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ವರ್ತನೆ ಸರಿಯಿಲ್ಲ ಎಂದು ಎರಡು ದಿನಗಳ ಹಿಂದೆ ಕಿಡಿ ಕಾರಿದ್ದ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಮತ್ತೆ ಚಿದಂಬರಂ ಟೀಕಿಸುವ ಮೂಲಕ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡುತ್ತಾ, ಚಿದಂಬರಂ ವಿರುದ್ಧ ತಾನು ನೀಡಿದ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಸಚಿವ ಸ್ಥಾನದಲ್ಲಿರುವಾಗ ಹೊಣೆಗಾರಿಕೆ ಹೊತ್ತುಕೊಂಡು ಕಾರ್ಯ ನಿರ್ವಹಿಸಬೇಕು. ಅದು ಬಿಟ್ಟು ನನಗೆ ಲಿಮಿಟೇಶನ್ ಇದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಚಿದಂಬರಂ ಪ್ರಧಾನ ಮಂತ್ರಿ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸಚಿವರಾಗಿ ಅಧಿಕಾರದಲ್ಲಿರುವಾಗ ಸ್ವತಃ ಆಕ್ಟ್ ಮಾಡಬೇಕು ಎಂದು ಪೂಜಾರಿ ನುಡಿದರು.
ದೇಶಾದ್ಯಂತ ನಕ್ಸಲರು ಬಡವರನ್ನು ಹೀನಾಯ ರೀತಿಯಲ್ಲಿ ಸಾಯಿಸುತ್ತಿರುವುದು ಖಂಡನೀಯ. ನಕ್ಸಲರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು. ನಕ್ಸಲರ ದಮನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಗದಿದ್ದರೆ ಚಿದಂಬರಂ ರಾಜೀನಾಮೆ ನೀಡುವುದು ಉತ್ತಮ ಎಂದು ಪೂಜಾರಿ ಉಡುಪಿಯಲ್ಲಿ ಆಗ್ರಹಿಸಿದ್ದರು.
ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ದುರಂತರದಲ್ಲಿ ಮೃತಪಟ್ಟವರಿಗೆ ಕೇಂದ್ರ ಸರಕಾರ ಘೋಷಿಸಿರುವ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಪೂಜಾರಿ ಈ ಸಂದರ್ಭ ಆಗ್ರಹಿಸಿದರು. ಕೇಂದ್ರ ಈಗಾಗಲೇ ಎರಡು ಲಕ್ಷ ರೂ. ಮೊತ್ತ ಘೋಷಿಸಿದ್ದು, ಅದನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ. ಈ ಕುರಿತು ಸಂಸದ ಆಸ್ಕರ್ ಫರ್ನಾಂಡಿಸ್ ಕೂಡ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದರು.
ವಿಮಾನಯಾನ ಅಂತಾರಾಷ್ಟ್ತ್ರೀಯ ಒಪ್ಪಂದ ಪ್ರಕಾರ ಪ್ರತಿಯೊಬ್ಬ ಪ್ರಯಾಣಿಕರಿಗೂ 1,65,000 ಡಾಲರ್ ಅಂದರೆ ಸುಮಾರು 76 ಲಕ್ಷ ರೂ. ಪರಿಹಾರ ನೀಡಬೇಕು. ಅದರಂತೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.