ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀರವಿಶಂಕರ್ ಗುರೂಜಿ ಅವರ ಮೇಲೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ. ಆದರೆ ಗುರೂಜಿ ಯಾವುದೇ ಗಾಯಗಳಿಲ್ಲದೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿರುವ ಯಜ್ಞ ಶಾಲೆಯ ಬಳಿ ಈ ದುರ್ಘಟನೆ ನಡೆದಿದ್ದು, ಆಶ್ರಮದ ಭಕ್ತರೋರ್ವರಾದ ಬೆಂಗಳೂರಿನ ವಿನಯ್ ಎಂಬವರ ಕಾಲಿಗೆ ಗುಂಡಿನ ಗಾಯವಾಗಿದ್ದು, ಅವರನ್ನು ಕೂಡಲೇ ಆಶ್ರಮದ ಆವರಣದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧ್ಯಾನ ಮುಗಿಸಿ ಸಂಜೆ ಸುಮಾರು ಆರು ಗಂಟೆ ವೇಳೆಗೆ ಗುರೂಜಿ ತಮ್ಮ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಕ್ತರ ನಡುವೆ ನಡೆದು ಹೋಗುತ್ತಿದ್ದರು. ಇದೇ ಸಂದರ್ಭ ಭಕ್ತರ ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೋರ್ವ ಏಕಾಏಕಿ ರಿವಾಲ್ವರ್ ಮೂಲಕ ಗುರೂಜಿ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಭೂ ವಿವಾದದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಗುರೂಜಿ ಜೊತೆಗೆ ಸುಮಾರು 8 ಸಾವಿರ ಮಂದಿ ಭಕ್ತರಿದ್ದರು.
ವಿಧಿ ವಿಜ್ಞಾನ ಪ್ರಯೋಗಾಲಯಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿದ್ದ ಒಂದು ಗುಂಡನ್ನು ವಶಪಡಿಸಿಕೊಂಡಿದ್ದಾರೆ. ಕೇಂದ್ರ ವಲಯ ಐಜಿಪಿ ಕಮಲ್ ಪಂತ್, ರಾಮನಗರ ಉಪ ವಿಭಾಗದ ಡಿವೈಎಸ್ಪಿ ದೇವರಾಜು ಮತ್ತಿತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತಡರಾತ್ರಿ ಪರಿಶೀಲನೆ ನಡೆಸಿದರು.
ದೇವರ ದಯೆಯಿದೆ-ರವಿಶಂಕರ್: ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಂಕರ್ ಗುರೂಜಿ, ದಾಳಿಯ ಹಿಂದೆ ದುಷ್ಟಶಕ್ತಿಗಳ ಕೈವಾಡವಿದೆ. ಬಿಹಾರ, ಕಾಶ್ಮೀರ, ಜಾರ್ಖಂಡ್‌ನಿಂದ ಬಹಳಷ್ಟು ಜನ ಹಿಂಸಾ ಮಾರ್ಗವನ್ನು ತೊರೆದು ಆಶ್ರಮಕ್ಕೆ ಬಂದು ಶಾಂತಿ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಇದನ್ನು ಸಹಿಸದ ಕೆಲ ವ್ಯಕ್ತಿಗಳು ಈ ದುಷ್ಕೃತ್ಯ ಎಸಗಿದ್ದಾರೆ ಎಂದರು.
ಭಗವಂತನ ದಯೆಯಿಂದ ನನಗೇನೂ ಆಗಿಲ್ಲ. ನಾನು ಸುರಕ್ಷಿತವಾಗಿದ್ದೇನೆ. ಘಟನೆಯ ನಂತರವೂ ಸತ್ಸಂಗ ಕಾರ್ಯಕ್ರಮ ನಡೆಸಿದ್ದೇನೆ. ಯಾರೂ ಭಕ್ತರು ಭಯಪಡಬಾರದು. ನನ್ನ ಮೇಲೆ ದಾಳಿ ನಡೆಸಲು ಹೊರಟವರಿಗೂ ಈಗ ಜ್ಞಾನೋದಯವಾಗಿರಬಹುದು, ಅಥವಾ ಪಶ್ಚಾತಾಪವಾಗಿರಬಹುದು ಎಂದು ಹೇಳಿದರು.
ನನ್ನ ಮೇಲೆ ದಾಳಿ ಮಾಡಿದ ವ್ಯಕ್ತಿ ನನ್ನ ಜೊತೆ ಕೆಲ ಹೊತ್ತು ಕಳೆದರೆ ಆತ ಹಿಂಸಾ ಮಾರ್ಗವನ್ನು ತ್ಯಜಿಸುವಂತೆ ಮಾಡಬಲ್ಲೆ ಎಂದ ಗುರೂಜಿ, ನನ್ನ ಇಡೀ ಜೀವನದಲ್ಲಿ ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಯಾವತ್ತೂ ಯಾರಿಗೂ ಹಿಂಸೆ ಮಾಡಿಲ್ಲ. ನನಗೆ ಯಾರು ಶತ್ರುಗಳಿಲ್ಲ. ನಾನು ಆತನನ್ನು ಕ್ಷಮಿಸಿದ್ದೇನೆ ಎಂದು ಹೇಳಿದರು. ಸದ್ಯ ಆಶ್ರಮಕ್ಕೆ ಸದ್ಯ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.