'ನಮ್ಮದೇನಿದ್ದರೂ ಹೈ ಲೆವೆಲ್ ರಾಜಕಾರಣ, ನಾವು ವಿಶ್ವನಾಥ್ ಅವರ ಮಟ್ಟಕ್ಕಿಳಿದು ಹೇಳಿಕೆಗಳನ್ನು ನೀಡುವುದಿಲ್ಲ' ಎಂದು ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಜತೆ ಚುನಾವಣಾ ಮೈತ್ರಿ ಬೇಡ ಎಂದು ವಿಶ್ವನಾಥ್ ನೀಡಿರುವ ಹೇಳಿಕೆಗೆ ಕುಮಾರಸ್ವಾಮಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ನೆಲಕಚ್ಚಿದ್ದು, ಆ ನಿಟ್ಟಿನಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದರು.
ಅಲ್ಲದೇ ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಪಟ್ಟ ಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕಾದ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆ ನಿಟ್ಟಿನಲ್ಲಿ ಮೈತ್ರಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್‌ನ ಕೆಲವು ನಾಯಕರಲ್ಲಿ ಗೊಂದಲಗಳಿರಬಹುದು. ಆದರೆ, ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಷ್ಟಕ್ಕೂ ನಾನು ವಿಶ್ವನಾಥ್ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿಲ್ಲ. ಕಾಂಗ್ರೆಸ್‌ನ ದೆಹಲಿ ಮಟ್ಟದ ಜವಾಬ್ದಾರಿಯುತ ನಾಯಕರ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.