ಹಸಿರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ರೈತರಿಗೆ ಮೋಸ ಮಾಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಯಡಿಯೂರಪ್ಪ ನಾಯಕತ್ವದ ಬಿಜೆಪಿ ಸರ್ಕಾರ ಎರಡು ವರ್ಷಗಳನ್ನು ಪೂರೈಸುತ್ತಿದೆ. ಆದರೆ, ಈ ಎರಡೂ ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯ. ರಾಜ್ಯದ ಜನತೆಗೆ ಹೇಳಿದ್ದು ಅಭಿವೃದ್ದಿಯ ಪಾಠ. ಆದರೆ ಅಭಿವೃದ್ದಿಯ ನೆಪದಲ್ಲಿ ರಾಜ್ಯದ ಖಜಾನೆಯನ್ನೇ ಲೂಟಿ ಮಾಡಿ ಸಾಧನೆ ಮಾಡಿದ್ದಾರೆ ಎಂದು ದೂರಿದರು.
ಹಾವೇರಿಯಲ್ಲಿ ರೈತರ ಎದೆಗೆ ಗುಂಡಿಕ್ಕಿದ್ದಲ್ಲದೆ, ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿ ಕೈಗೆ ಲಾಟಿ ಕೊಟ್ಟು ಹೊಡೆಸಿದ ಮಹಾನುಭಾವ ಈ ಯಡಿಯೂರಪ್ಪ. ಇಷ್ಟಕ್ಕೆ ರೈತರ ಮೇಲಿನ ದಬ್ಬಾಳಿಕೆ ನಿಲ್ಲಿಸದೆ ಅನ್ನದಾತನ ಕೈಗೆ ಕೈಕೊಳ ಹಾಕಿಸಿದ್ದೆ ದೊಡ್ಡ ಸಾಧನೆ. ರಾಜಕೀಯವನ್ನೆ ಹೊಲಸು ಮಾಡಿ ಆಪರೇಷನ್ ಕಮಲ ಸೃಷ್ಟಿ ಮಾಡಿದ್ದೇ ಬಹುದೊಡ್ಡ ಸಾಧನೆ ಅಂತಾ ತಿಳಿದಿದ್ದರೆ, ಯಡಿಯೂರಪ್ಪ ರಾಜಕಾರಣದಲ್ಲಿ ಮಾಡಿದ ಬಹುದೊಡ್ಡ ತಪ್ಪು ಅದು. ಮುಂದಿನ ದಿನಗಳಲ್ಲಿ ಅದರ ಪರಿಣಾಮ ಅನುಭವಿಸುತ್ತಾರೆ ಎಂದು ಗುಡುಗಿದರು.
ವಿದ್ಯುತ್ ಖರೀದಿಸುವ ನೆಪದಲ್ಲಿ ಲಂಚಗುಳಿತನ ಹಾಗೂ ಮಧ್ಯರಾತ್ರಿ ಸಾವಿರಾರು ಕೋಟಿ ರೂ.ಗಳ ಬಿಡಿಎ ಟೆಂಡರ್ ಕಾರ್ಯಾಚರಣೆ, ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಸಹಾಯ ಮಾಡಿ ಎಂದು ಬೀದಿಗಿಳಿದು ವಸೂಲಿ ಮಾಡಿದ ಹಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನೈಸ್ ರಸ್ತೆಯ ಖೇಣಿಯ ಅವ್ಯವಹಾರದಲ್ಲಿ ಪಾಲುಗಾರರಾಗಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.
ಖಾಸಗಿ ಚಾನೆಲ್ ಹಾಗೂ ಪತ್ರಿಕೆಯೊಂದು ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಬಗ್ಗೆ ಜಂಟಿಯಾಗಿ ಸಮೀಕ್ಷೆ ನಡೆಸಿ ಯಡಿಯೂರಪ್ಪನವರದ್ದು ಅತ್ಯುತ್ತಮ ಸಾಧನೆ ಎಂದು ಬಿಂಬಿಸಿದ್ದಾರೆ. ಅವರು ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎನಿಸುತ್ತದೆ ಎಂದು ಸಹ ತಿಳಿಸಿದರು.