ಗುಂಡು ಹಾರಿಸಿದವನನ್ನು ಕ್ಷಮಿಸಿದ್ದೇನೆ; ರವಿಶಂಕರ್ ಗುರೂಜಿ
ಬೆಂಗಳೂರು, ಸೋಮವಾರ, 31 ಮೇ 2010( 14:07 IST )
PR
ನಗರದ ಆರ್ಟ್ ಆಫ್ ಲಿವಿಂಗ್‌ನಲ್ಲಿ ಭಾನುವಾರ ಸಂಜೆ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ತಾನು ದಾಳಿಕೋರನನ್ನು ಕ್ಷಮಿಸಿದ್ದೇನೆ. ಅಲ್ಲದೇ ಆತ ತನ್ನ ಸತ್ಸಂಗ ಕಾರ್ಯಕ್ರಮಕ್ಕೆ ಆಗಮಿಸಿದ್ದಲ್ಲಿ ಯೋಗವನ್ನು ಕಲಿಸಿಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಭಾನುವಾರ ಸಂಜೆ ದುಷ್ಕರ್ಮಿಯೊಬ್ಬ ರವಿಶಂಕರ್ ಗುರೂಜಿಯನ್ನು ಗುರಿಯಾಗಿರಿಸಿಕೊಂಡು ರಿವಾಲ್ವರ್‌ನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ನಡೆದಿತ್ತು.
ಗುರೂಜಿ ಮೇಲೆ ದಾಳಿ ನಡೆದಿಲ್ಲ: ಗುಂಡಿನ ದಾಳಿ ಘಟನೆ ನಂತರ ಇದೀಗ ಪೊಲೀಸರು ವಿವರಣೆ ನೀಡಿದ್ದು, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿಯನ್ನು ಗುರಿಯಾಗಿರಿಸಿಕೊಂಡು ಈ ದಾಳಿಯನ್ನು ನಡೆಸಿಲ್ಲ ಎಂದು ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಸತ್ಸಂಗ ಮುಗಿಸಿ ಹೊರಟು ಕಾರು ಹತ್ತುವ ಸಂದರ್ಭದಲ್ಲಿ ಗಂಡಿನ ಶಬ್ದ ಕೇಳಿಸಿತ್ತು. ಆದರೆ ಅದು ಗುಂಡಿನ ದಾಳಿ ಎಂದು ನನಗೆ ತಿಳಿದಿರಲಿಲ್ಲ, ಯಾಕೆಂದರೆ ಆ ಸಂದರ್ಭದಲ್ಲಿ ಮಳೆ ಬರುತ್ತಿತ್ತು. ದಾಳಿ ನಡೆಸಿದ ವ್ಯಕ್ತಿಯನ್ನೂ ನಾನು ನೋಡಿಲ್ಲ. ಆದರೆ ನನಗೆ ಭಯ ಆಗಿಲ್ಲ. ಈ ಘಟನೆಯಿಂದ ಭಕ್ತರ ಧೈರ್ಯಗೆಡಬೇಕಾದ ಅಗತ್ಯವಿಲ್ಲ. ನಾನು ಶಾಂತಿಯನ್ನು ಬೋಧಿಸುವವನು. ಆದರೆ ಈ ಘಟನೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಆ ನಿಟ್ಟಿನಲ್ಲಿ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ ವರದಿ ನೀಡಬೇಕೆಂದು ಗುರೂಜಿ ಈ ಸಂದರ್ಭದಲ್ಲಿ ತಿಳಿಸಿದರು.
ನನಗೆ ಯಾರೂ ಶತ್ರುಗಳಿಲ್ಲ, ಹಾಗಾಗಿ ಯಾರೂ ಆ ರೀತಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ನಾನು ಆ ಘಟನೆಯನ್ನು ಮರೆತುಬಿಟ್ಟಿದ್ದೇನೆ. ದಾಳಿಕೋರನನ್ನು ಕ್ಷಮಿಸಿರುವುದಾಗಿಯೂ ಗುರೂಜಿ ತಿಳಿಸಿದ್ದು, ಆತ ನನ್ನ ಸತ್ಸಂಗದಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತೇನೆ. ನಾನು ಆತನಿಗೆ ಆಧ್ಯಾತ್ಮಿಕ ಕಲಿಸುತ್ತೇನೆ ಎಂದರು.
ಶಿಷ್ಯ ವಿನಯ್‌ಗೆ ತಗುಲಿತ್ತು ಗುಂಡು: ಸತ್ಸಂಗ ನಡೆದ ನಂತರ ನಡೆಸಿದ ಗುಂಡಿನ ದಾಳಿಯಲ್ಲಿ ಗುರೂಜಿ ಶಿಷ್ಯ ವಿನಯ್ ಅವರಿಗೆ ತಗುಲಿತ್ತು. ಆದರೆ ಅದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ದಾಳಿಯ ಹಿಂದೆ ವಿನಯ್ ತಂದೆ ಅವರೇ ಶಾಮೀಲಾಗಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ. ಘಟನೆ ಕುರಿತಂತೆ ಗುಂಡಿನ ದಾಳಿಯನ್ನು ಯಾರು ನಡೆಸಿದರು, ಯಾಕಾಗಿ ನಡೆಸಿದರು ಎಂಬುದು ಇನ್ನಷ್ಟೇ ತನಿಖೆಯಿಂದ ಬಯಲಾಗಬೇಕಾಗಿದೆ.
ನಮ್ಮ ತಂದೆ ಮತ್ತು ನನ್ನ ನಡುವೆ ಯಾವುದೇ ದ್ವೇಷವಿಲ್ಲವಾಗಿತ್ತು. ನಾನು ಗುರೂಜಿ ಅವರ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಎಂದು ವಿನಯ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕುಟುಂಬ ಬೆಳಗಾವಿಯಲ್ಲಿ ವಾಸವಾಗಿದ್ದು, ತಾನು ಗುರೂಜಿ ಅವರ ಭಕ್ತನಾಗಿರುವುದಾಗಿ ವಿನಯ್ ಹೇಳಿದ್ದಾರೆ.