ಕತ್ತಿ, ಮಚ್ಚು ಹಿಡಿದುಕೊಂಡು ಹೊಡೆದಾಡಲಿ ನಮಗೇನೂ ತೊಂದರೆಯಿಲ್ಲ. ಇದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿರುಕು ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ವ್ಯಂಗ್ಯೋಕ್ತಿ!
ಸೋಮವಾರ ವಿಧಾನಪರಿಷತ್‌ಗೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಪಕ್ಷಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಮುಂದೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅವರಿಗೆ ಬೇಕಾದಾಗ ಹೊಂದಾಣಿಕೆಯಂತೆ, ಬೇಡವಾದಾಗ ದೋಸ್ತಿ ಇಲ್ಲಾಂತಾರೆ. ಸಂಖ್ಯಾಬಲದ ಆಧಾರದ ಮೇಲೆ ನಾವು ನಾಲ್ಕು ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿ ಹೊಂದಿದ್ದೇವೆ. ಅದರಂತೆ ನಾಲ್ಕು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಅಲ್ಲದೇ ಹೆಚ್ಚುವರಿ ಅಭ್ಯರ್ಥಿಗಳನ್ನು ನಿಲ್ಲಿಸಿ ಗೊಂದಲ ಉಂಟು ಮಾಡಿಲ್ಲ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಅನಂತ್ ಕುಮಾರ್ ಮಾತನಾಡಿ, ಚುನಾವಣೆ ನಂತರ ವಿಧಾನಪರಿಷತ್‌ನಲ್ಲಿ ಪಕ್ಷಗಳ ಸಂಖ್ಯಾಬಲ ಏರುಪೇರಾಗಲಿರುವುದರಿಂದ ಬಿಜೆಪಿಗೆ ಸಭಾಪತಿ ಸ್ಥಾನ ದೊರಕಲಿದೆ ಎಂದು ತಿಳಿಸಿದರು.