ಅಸ್ತಿತ್ವ ಕಳೆದುಕೊಂಡಿರುವ ಜೆಡಿಎಸ್ ಜತೆ ಮೈತ್ರಿಯ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡರ ಪಟ್ಟಿಗೆ ಪ್ರಸಾದ್ ಸೇರ್ಪಡೆ ಆಗಿದ್ದಾರೆ. ಎರಡು ಜಿಲ್ಲೆ ಬಿಟ್ಟರೆ ಜೆಡಿಎಸ್‌ಗೆ ಬೇರೆಲ್ಲೂ ಅಸ್ತಿತ್ವವಿಲ್ಲ. ಅಂತಹ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದರಿಂದ ಕಾಂಗ್ರೆಸ್‌ಗೆ ಯಾವ ಪ್ರಯೋಜನವೂ ಇಲ್ಲ ಎಂದರು.
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರ ಖರೀದಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ಚುನಾವಣೆಗೆ ಮಾತ್ರ ಸೀಮಿತವಾಗಿ ಹೊಂದಾಣಿಕೆಗೆ ಚಿಂತನೆ ನಡೆದಿದೆ. ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.
ಜೆಡಿಎಸ್ ಸ್ವಂತ ಬಲದಿಂದ ರಾಜ್ಯಸಭೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬೆಂಬಲ ಕೋರಿದೆ. ಆದರೆ, ಇನ್ನು ಮುಂದೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ. ಈ ಸಂಬಂಧ ಮುಖಂಡರು, ಹೈಕಮಾಂಡ್ ಜತೆ ಚರ್ಚಿಸಿ ಮನವೊಲಿಸುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡರಲ್ಲಿ ಸಾಮರಸ್ಯದ ಕೊರತೆಯೇ ಬಿಜೆಪಿಗೆ ಬಂಡವಾಳವಾಗಿದೆ. ಇದರಿಂದಾಗಿ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ಪಕ್ಷದೊಳಗೆ ತುರ್ತು ಶಸ್ತ್ರ ಚಿಕಿತ್ಸೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳಂಕಿತ ಸಚಿವರಿಂದ ಕೂಡಿರುವ ಬಿಜೆಪಿ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದ ಅವರು, ವಿಧಾನಸೌಧದ ಮೆಟ್ಟಿಲೇ ಏರದವರನ್ನೆಲ್ಲ, ಬಹುಮತ ಸಾಬೀತುಪಡಿಸಲೆಂದು ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೆಳೆದುಕೊಂಡಿದ್ದೇ ಬಿಜೆಪಿ ಸರಕಾರದ ಎರಡು ವರ್ಷದ ಸಾಧನೆ ಎಂದು ಟೀಕಿಸಿದರು.