ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವವರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ವ್ಯವಸ್ಥೆ ಜಾರಿಗೊಳ್ಳಬೇಕು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ತಾಲೂಕಿನ ಬೇವಿನಮಟ್ಟಿಯಲ್ಲಿ ಜಿಲ್ಲೆಯ ವಾಲ್ಮೀಕಿ, ನಾಯಕ ಸಮಾಜ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ವಾಲ್ಮೀಕಿ, ನಾಯಕ ಸಮಾವೇಶದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವ ನವದಂಪತಿಗೆ ಬಿಪಿಎಲ್ ಕಾರ್ಡ್ ನೀಡಿದರೆ ಭಾವಿ ಜೀವನಕ್ಕೆ ಸಹಾಯ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕು ಎಂದು ವೇದಿಕೆಯಲ್ಲಿದ್ದ ಕಂದಾಯ ಸಚಿವ ಕರುಣಾಕರ ರೆಡ್ಡಿ ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು ಈ ವಿಷಯ ತಿಳಿಸಿದರು.
ಬಳ್ಳಾರಿಯಲ್ಲಿ ಈವರೆಗೆ ಸಾಮೂಹಿಕ ವಿವಾಹಗಳ ಆಯೋಜನೆಯ ಮೂಲಕ ಬಡವರಿಗೆ ನೆರವು ನೀಡಿದ್ದೇವೆ. ಈಗಾಗಲೇ ಸಾಮೂಹಿಕ ವಿವಾಹಗಳ ಸಂಖ್ಯೆಯಿಂದಾಗಿ ವಿಶ್ವ ದಾಖಲೆ ಸ್ಥಾಪಿಸಿದ್ದೇವೆ. ಮತ್ತಷ್ಟು ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಗಿನ್ನೆಸ್ ದಾಖಲೆ ಸ್ಥಾಪಿಸಲಿದ್ದೇವೆ ಎಂದರು.
ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹೇರಲು ಸಾಧ್ಯ. ಮಠಗಳು, ಸಂಘ, ಸಂಸ್ಥೆಗಳು ಹಲವು ವರ್ಷಗಳಿಂದ ಸಾಮೂಹಿಕ ವಿವಾಹ ನೆರವೇರಿಸುತ್ತಿವೆ. ಸಮಾಜದ ಎಲ್ಲರೂ ಸಾಮೂಹಿಕ ವಿವಾಹಗಳ ಸಂಘಟನೆಗೆ ನೆರವು ನೀಡಬೇಕೆಂದರು.