ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಅತಂತ್ರ ಸ್ಥಿತಿ ತಲುಪಿರುವ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ 5ರಂದು ನಡೆಯುವ ಚುನಾವಣೆಗೆ ಸೋಮವಾರ ಎಂಟು ಮಂದಿ ನಾಮಪತ್ರ ಸಲ್ಲಿಸುವ ಮೂಲಕ ಕುತೂಹಲ ಕೆರಳಿಸಿದೆ.
ನಾಮಪತ್ರ ಹಿಂದಕ್ಕೆ ಪಡೆಯಲು ಜೂನ್ 3ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಬಿಜೆಪಿಯಿಂದ ವಿ.ಸೋಮಣ್ಣ, ಮಾಜಿ ಲೋಕಸಭಾ ಸದಸ್ಯ ಸಿ.ಎಚ್.ವಿಜಯಶಂಕರ್, ಅಶ್ವತ್ಥ್ ನಾರಾಯಣಗೌಡ, ನಾರಾಯಣ ಸಾ ಬಾಂಗಡೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನಿಂದ ವೀರಣ್ಣ ಮತ್ತಿಕಟ್ಟಿ, ಆರ್.ವಿ.ವೆಂಕಟೇಶ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.
ಅದೇ ರೀತಿ ಜೆಡಿಎಸ್‌ನಿಂದ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಹಾಗೂ ಎಂ.ಶ್ರೀನಿವಾಸ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮೈತ್ರಿ ಅತಂತ್ರ: ವಿಧಾನಪರಿಷತ್ತಿನ ಒಂದು ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಟ್ಟು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಚುನಾವಣಾ ಹೊಂದಾಣಿಕೆಯಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಮೈತ್ರಿಯಲ್ಲಿ ಜೆಡಿಎಸ್ ಅಪಸ್ವರ ಎತ್ತುವ ಮೂಲಕ ಎರಡು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮೈತ್ರಿ ಮುರಿಯಲು ಮೋಟಮ್ಮ ಕಾರಣ-ದೇವೇಗೌಡ ಕಿಡಿ: ತನ್ನ ಪ್ರತಿಪಕ್ಷ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಆತಂಕದಿಂದ ಮೋಟಮ್ಮ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಮೈತ್ರಿಗೆ ಅಡ್ಡಿ ಉಂಟಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯಸಭೆಗೆ ಕಾಂಗ್ರೆಸ್ ಬಿ.ಕೆ.ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿರುವುದಕ್ಕೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಮೈತ್ರಿ ಅತಂತ್ರವಾಗಿದೆ. ಆದರೂ ಜೂನ್ 3ರವರೆಗೆ ನಾಮಪತ್ರ ಹಿಂತೆಗೆಯಲು ಅವಕಾಶ ಇರುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವ ಒಪ್ಪಂದ ನಡೆಯುತ್ತದೆ ಎಂಬುದರ ಮೇಲೆ ನಿರ್ಧಾರವಾಗಲಿದೆ.