ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ನಿಯಂತ್ರಿಸಿ ಜೀವನ ನಿರ್ವಹಣೆಗೆ ಅವಕಾಶ ಕಲ್ಪಿಸಲು ರಾಜ್ಯಮಟ್ಟದ ಕಾರ್ಯಪಡೆ ಶೀಘ್ರ ರಚನೆಯಾಗಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ನೀನಾ ಪಿ.ನಾಯಕ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾರ್ಯಪಡೆ ರಚನೆ ಕೋರಿ ಬರೆದ ಪತ್ರಕ್ಕೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಎಲ್ಲ ಇಲಾಖೆ ಕಾರ್ಯದರ್ಶಿಗಳ ಸಭೆ ಶೀಘ್ರ ಕರೆದು ಸಮಾಲೋಚಿಸಲಿದ್ದು, ಈ ಸಭೆಯಲ್ಲಿ ಭಾಗವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಹಿತಿ ನೀಡಲು ಕೋರಿದ್ದಾರೆ. ಆಯೋಗದ ವಾರ್ಷಿಕ ವೆಚ್ಚಕ್ಕೆ 1.50 ಕೋಟಿ ರೂ. ನೀಡಲಾಗಿದೆ. ಆದರೆ, ಅಧಿಕಾರ ನೀಡದಿರುವ ಕಾರಣ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರಮಟ್ಟದಲ್ಲಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ಸಂಪುಟ ಕಾರ್ಯದರ್ಶಿ ಸ್ಥಾನಮಾನ ನೀಡಿದ್ದು, ಇದೇ ಮಾದರಿ ಅನುಸರಿಸಬೇಕು ಎಂದು ಕೋರಿ ಬರೆದ ಪತ್ರಕ್ಕೆ ಮುಖ್ಯಮಂತ್ರಿ, ಗೃಹ ಸಚಿವರು ಪ್ರತಿಕ್ರಿಯೆ ನೀಡಿಲ್ಲ. ಆಯೋಗದ ಸದಸ್ಯರಿಗೆ ಪ್ರವಾಸ ಸೇರಿ ಇತರೆ ಭತ್ಯೆ ಕೊಟ್ಟಿಲ್ಲ. ಪ್ರತಿ ಸಭೆಗೆ 500 ರೂ. ಪ್ರೋತ್ಸಾಹಧನ ಹೊರತುಪಡಿಸಿದರೆ ಉಳಿದ ಸವಲತ್ತುಗಳು ಮರೀಚಿಕೆಯಾಗಿವೆ ಎಂದರು.
ಮಕ್ಕಳ ಹಕ್ಕುಗಳ ಉಲ್ಲಂಘನೆ ಬಗ್ಗೆ ಆಯೋಗಕ್ಕೆ 200 ದೂರುಗಳು ಸಲ್ಲಿಕೆಯಾಗಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳ ಪ್ರಕರಣಗಳು ಜಾಸ್ತಿಯಿವೆ. 0-6 ವರ್ಷ ವಯೋಮಿತಿ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸ್ಪಷ್ಟ ಯೋಜನೆಯೊಂದಿಲ್ಲ ಎಂದು ನೀನಾ ವಿಷಾದಿಸಿದರು.
ಬಾಲ್ಯ ವಿವಾಹ, ಅಂಗನವಾಡಿಯಲ್ಲಿ ಮಕ್ಕಳ ಸಂರಕ್ಷಣೆ ಕೊರತೆ, ಪೌಷ್ಟಿಕ ಆಹಾರ ವಿತರಣೆಯಲ್ಲಿ ಅನ್ಯಾಯ, ಶಾಲೆಗಳಲ್ಲಿ ಲೈಂಗಿಕ ಕಿರುಕುಳ, ಹಾಸ್ಟೆಲ್ ಸಮಸ್ಯೆಗಳ ಕುರಿತು ದೂರುಗಳು ಹೆಚ್ಚಿವೆ. ಸಂಬಂಧಿಸಿದ ಅಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದು, ಕೆಲ ಪ್ರಕರಣಗಳಲ್ಲಿ ಕ್ರಮ ಜಾರಿಯಾಗಿದೆ ಎಂದರು.