ಕೇಂದ್ರ ಸರ್ಕಾರದಿಂದ ಈ ವರ್ಷ ಉದ್ಯೋಗ ಖಾತ್ರಿ ಯೋಜನೆಗಾಗಿ 4600 ಕೋಟಿ ರೂ.ಗಳ ಅನುದಾನ ಬಂದಿದ್ದು, ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ಕರೆ ನೀಡಿದರು.
ಕರ್ನಾಟಕ ಆಡಳಿತ ವಿಕೇಂದ್ರೀಕರಣದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೆಳಹಂತದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ಅತೀ ಕಡುಬಡವರಿಗೂ ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಪ್ರತಿಯೊಬ್ಬ ಅಧಿಕಾರಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯ ಸುಧಾರಣೆಯು ಸತತ ಪರಿಶ್ರಮ ಹಾಗೂ ಪ್ರಾಮಾಣಿಕವಾಗಿ ಸಾಗಿದಾಗ ಮಾತ್ರ ಗಾಂಧೀಜಿ ಕಂಡ ಕನಸು ನನಸಾಗಲು ಸಾಧ್ಯ ಎಂದರು.
ಬಹುಮುಖ್ಯವಾಗಿ ಸ್ವಚ್ಛತೆ ಹಾಗೂ ಶೌಚಾಲಯದ ಬಗ್ಗೆ ಅವರಿಗೆ ಜಾಗೃತಿ ಮೂಡಿಸುವಲ್ಲಿ ಪಾತ್ರ ಮಹತ್ವದ್ದಾಗಿದೆ. ಮುಂಬರುವ ಎರಡು ವರ್ಷಗಳಲ್ಲಿ 56 ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಅವರಿಗೆ ಅರಿವು ಉಂಟು ಮಾಡುವ ಕೆಲಸ ಶೀಘ್ರವೇ ಆಗಬೇಕಾಗಿದೆ. ಎಲ್ಲ ಗ್ರಾಮಗಳು ಗ್ರಾಮ ನೈರ್ಮಲ್ಯ ಪುರಸ್ಕಾರ ಪಡೆಯುವಂತೆ ಗ್ರಾಮೀಣರಿಗೆ ಜಾಗೃತಿಯನ್ನುಂಟು ಮಾಡಬೇಕಾಗಿದೆ ಎಂದು ವಿವರಿಸಿದರು.